ಬೆಂಗಳೂರು: ರೈತರಿಗೆ ಬೆನ್ನೆಲುಬಾಗಿದ್ದ ಪಶುಸಂಗೋಪನಾ ಇಲಾಖೆಯ ಯೋಜನೆಗಳು ಈಗ ಸಮರ್ಪಕವಾಗಿ ಅನುಷ್ಠಾನ ಆಗುತ್ತಿಲ್ಲ ಎಂದು ಮಾಜಿ ಸಚಿವ ಪ್ರಭು ಚೌಹಾಣ್ ಅಸಮಾಧಾನ ವ್ಯಕ್ತಪಡಿಸಿ, ಪಶುಸಂಗೋಪನಾ ಇಲಾಖೆಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಭೇಟಿ ಮಾಡಿದ ಪ್ರಭು ಚೌಹಾಣ್, ರಾಜ್ಯದಲ್ಲಿ ಮೂರು-ನಾಲ್ಕು ತಿಂಗಳಿನಿಂದ ಗೋಹತ್ಯೆ ಅವ್ಯಾಹತವಾಗಿ ನಡೆಯುತ್ತಿದ್ದು ಮೂಕ ಪ್ರಾಣಿಗಳ ರಕ್ಷಣೆ ಆಗುತ್ತಿಲ್ಲ. ಕಸಾಯಿ ಖಾನೆಗೆ ಸಾಗಣೆಯಾಗುತ್ತಿರುವ ಗೋವುಗಳನ್ನು ರಕ್ಷಿಸಬೇಕು. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020 ಕಾಯ್ದೆಯನ್ನು ಹಿಂಪಡೆಯದೆ ಅದನ್ನು ಮತ್ತಷ್ಟು ಬಿಗಿಗೊಳಿಸಬೇಕು ಎಂದು ಒತ್ತಾಯಿಸಿದರು.
ಅನುದಾನವಿಲ್ಲದೆ ಸೊರಗಿದ ಪಶುಸಂಗೋಪನಾ ಇಲಾಖೆ: ರೈತರಿಗೆ, ಪಶುಪಾಲಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಸ್ಥಾಪಿತವಾದ ಪ್ರಾಣಿ ಕಲ್ಯಾಣ ಮಂಡಳಿ ಹಾಗೂ ಪ್ರಾಣಿ ಕಲ್ಯಾಣ ಸಹಾಯವಾಣಿಯಂತಹ ವಿಶಿಷ್ಟ ಯೋಜನೆಗಳಿಗೆ ಅನುದಾನ ಕಡಿತಗೊಳಿಸಲಾಗಿದೆ. ಇದರಿಂದ ಪಶುಸಂಗೋಪನೆ ಇಲಾಖೆ ಸೊರಗಿದೆ. ಇದರ ನೇರ ಪರಿಣಾಮವನ್ನು ಪಶುಪಾಲಕರು, ರೈತರು ಅನುಭವಿಸುತ್ತಿದ್ದಾರೆ ಎಂದರು.
ಗುಜರಿಗೆ ಸಂಚಾರಿ ಪಶು ಚಿಕಿತ್ಸಾ ವಾಹನಗಳು: ನಮ್ಮ ಸರ್ಕಾರದ ಅವಧಿಯಲ್ಲಿ ಅನುಷ್ಠಾನಗೊಂಡ ಸಂಚಾರಿ ಪಶು ಚಿಕಿತ್ಸಾ ವಾಹನಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ಈ ಯೋಜನೆಯನ್ನು ಕೇಂದ್ರ ಸರ್ಕಾರ ದೇಶಾದ್ಯಂತ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿತು. ಆದರೆ ರಾಜ್ಯದಲ್ಲಿ ಈ ಯೋಜನೆ ಮೂಲೆಗುಂಪಾಗುತ್ತಿರುವುದಕ್ಕೆ ಪ್ರಭು ಚೌಹಾಣ್ ಬೇಸರ ವ್ಯಕ್ತಪಡಿಸಿದರು. ಇಲಾಖೆಯ ಮಂತ್ರಿಗಳಿಗೆ ರೈತಪರ ಕಾಳಜಿ ಇಲ್ಲದಿರುವುದರಿಂದ ಇಲಾಖೆಯ ವಾಹನಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ನಿಂತಲ್ಲೇ ನಿಂತು ಕೆಟ್ಟು ಹೋಗುವಂತಹ ಪರಿಸ್ಥಿತಿ ಉಂಟಾಗಿದೆ ಎಂದು ತಿಳಿಸಿದರು.
ಗೋಶಾಲೆಗಳ ಸ್ಥಿತಿ ಚಿಂತಾಜನಕ: ಕಳೆದ ಸರ್ಕಾರದ ಅವಧಿಯಲ್ಲಿ 100 ಸರ್ಕಾರಿ ಗೋಶಾಲೆಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿತ್ತು. ಈಗ ಅನುದಾನ ಹಾಗೂ ಕಾಳಜಿ ಇಲ್ಲದೇ ಗೋಶಾಲೆಗಳನ್ನು ನಡೆಸುವುದು ಕಷ್ಟಕರವಾಗಿದೆ. ಇದರ ಬಗ್ಗೆ ಸರ್ಕಾರ ಹಾಗೂ ಇಲಾಖೆಯ ಮಂತ್ರಿಗಳು ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಪುಣ್ಯಕೋಟಿ ದತ್ತು ಯೋಜನೆಗೆ ಮರು ಜೀವಕ್ಕೆ ಮನವಿ: ಗೋವುಗಳ ಸಂರಕ್ಷಣೆ ಮಾಡುವ ದೃಷ್ಟಿಯಿಂದ ಹಾಗೂ ಸಮಾಜದಲ್ಲಿ ಗೋವುಗಳಿಗೆ ಇರುವ ಪುಣ್ಯಸ್ಥಾನವನ್ನು ಅರಿತು ಪುಣ್ಯಕೋಟಿ ದತ್ತು ಯೋಜನೆಯನ್ನು ಅನುಷ್ಠಾನಕ್ಕೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ತರಲಾಗಿತ್ತು. ಸಾರ್ವಜನಿಕರು ಗೋವುಗಳನ್ನು ದತ್ತು ಪಡೆದು ಗೋ ಸಂರಕ್ಷಣೆಯಲ್ಲಿ ಕೈಜೋಡಿಸುವ ಯೋಜನೆ ರೂಪಿಸಲಾಗಿತ್ತು. ಇದು ಸಹ ಮೂಲೆಗುಂಪಾಗಿರುವುದು. ಇದನ್ನು ಮತ್ತೆ ಪ್ರಾರಂಭಿಸಬೇಕೆಂದು ಮುಖ್ಯಮಂತ್ರಿಗಳಿಗೆ ಈ ಸಂದರ್ಭದಲ್ಲಿ ಮನವಿ ಮಾಡಿದರು.