ಬೆಂಗಳೂರು: ನಗರದಲ್ಲಿ ಎರಡನೇ ದಿನದ ಲಸಿಕೆ ಅಭಿಯಾನ ನಿನ್ನೆಯಿಂದ ಪ್ರಾರಂಭವಾಗಿದ್ದು, 45 ವರ್ಷದ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಂಡರು.
ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಕೊರೊನಾ ಲಸಿಕಾ ಅಭಿಯಾನ...
ಕೊರೊನಾ ಅಭಿಯಾನ ಎರಡನೆಯ ದಿನದ ಅಂಗವಾಗಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಲಸಿಕೆ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಅರ್ಹ ಸಿಬ್ಬಂದಿಗಳಿಗೆ ಲಸಿಕೆ ಹಾಕಲು ಸಿದ್ಧತೆ ಮಾಡಿಕೊಂಡು, ಕೆಲ ಸಾರಿಗೆ ನೌಕರರಿಗೆ ಲಸಿಕೆ ಹಾಕಲಾಯಿತು. ಮತ್ತೊಂದೆಡೆ ಲಸಿಕೆ ಕೊರತೆಯೂ ಕಂಡು ಬಂದಿತು.
ನ್ಯಾಯಾಲಯದ ಸಿಬ್ಬಂದಿಗೆ ಕೋವಿಡ್ ಲಸಿಕೆ...
ನ್ಯಾಯಮೂರ್ತಿಗಳು ಹಾಗೂ ನ್ಯಾಯಾಲಯದ ಸಿಬ್ಬಂದಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಹೈಕೋರ್ಟ್ನಲ್ಲಿ ಚಾಲನೆ ನೀಡಲಾಯಿತು. ಮೊದಲಿಗೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಟಿ.ಜಿ ಶಿವಶಂಕರೇಗೌಡ ಲಸಿಕೆ ಪಡೆದುಕೊಂಡರು. ಬಳಿಕ ಹೈಕೋರ್ಟ್ ಸಿಬ್ಬಂದಿ ಹಾಗೂ ನ್ಯಾಯಮೂರ್ತಿಗಳು ಸೇರಿದಂತೆ ಒಟ್ಟು 168 ಮಂದಿ ಲಸಿಕೆ ಪಡೆದುಕೊಂಡರು.
ನ್ಯಾಯಮೂರ್ತಿಗಳ ಪೈಕಿ ಮೊದಲಿಗೆ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಲಸಿಕೆ ಪಡೆದುಕೊಂಡರು. ಕೋವಿಡ್ ಎರಡನೇ ಅಲೆ ಆರಂಭವಾದ ಬಳಿಕ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ಎಲ್ಲ ಜಿಲ್ಲಾ ಪ್ರಧಾನ ನ್ಯಾಯಾಧೀಶರಿಗೆ ಪತ್ರ ಬರೆದು 45 ವರ್ಷ ದಾಟಿದ ಎಲ್ಲ ನ್ಯಾಯಾಂಗ ಅಧಿಕಾರಿಗಳು ಹಾಗೂ ಕೋರ್ಟ್ ಸಿಬ್ಬಂದಿ ಲಸಿಕೆ ಪಡೆಯುವಂತೆ ಮನವಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ವಿಧಾನಸೌಧದಲ್ಲಿ ಲಸಿಕಾ ಉತ್ಸವ...
ನಗರದಲ್ಲಿ ಲಸಿಕಾ ಉತ್ಸವ ಹಿನ್ನೆಲೆ ವಿಧಾನಸೌಧದಲ್ಲೂ ಲಸಿಕೆ ಕಾರ್ಯಕ್ರಮ ಕೈಗೊಳ್ಳಲಾಯಿತು. ಸಚಿವಾಲಯದ ನೌಕರರಿಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಲಸಿಕಾ ಉತ್ಸವವನ್ನು ಆಯೋಜಿಸಲಾಗಿತ್ತು. 45 ವರ್ಷ ಮೇಲ್ಪಟ್ಟ ನೌಕರರಿಗೆ ಕೋವಿಡ್ ಲಸಿಕೆಯನ್ನು ಹಾಕಲಾಯಿತು. ಸರತಿ ಸಾಲಿನಲ್ಲಿ ನಿಂತು ಸರ್ಕಾರಿ ಸಿಬ್ಬಂದಿ ಲಸಿಕೆ ಹಾಕಿಸಿಕೊಂಡರು. ಲಸಿಕಾ ಉತ್ಸವ ಏಪ್ರಿಲ್ 14ರ ವರೆಗೆ ನಡೆಯಲಿದೆ. ಆದರೆ ವಿಧಾನಸೌಧದಲ್ಲಿ ಏಪ್ರಿಲ್ 16ರ ವರೆಗೂ ನಡೆಯಲಿದೆ.