ಬೆಂಗಳೂರು: ಡೆಲ್ಟಾ ಪ್ಲಸ್ ಮುನ್ನೆಚ್ಚರಿಕೆ ಕ್ರಮವಾಗಿ ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಿಂದ ಬರುವವರಿಗೆ ಕೊರೊನಾ ತಪಾಸಣೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಅವರು ಇಂದು ತಮ್ಮ ನಿವಾಸದಲ್ಲಿ ಸಚಿವರು ಹಾಗೂ ಅಧಿಕಾರಿಗಳ ಜೊತೆ ಕೋವಿಡ್ -19 ನಿಯಂತ್ರಣದ ಕುರಿತು ಚರ್ಚೆ ನಡೆಸಿದರು.
ಕೋವಿಡ್-19 ರೂಪಾಂತರಿ ಡೆಲ್ಟಾ ಬಗ್ಗೆ ರಾಜ್ಯದಲ್ಲಿರುವ ಪ್ರಸ್ತುತ ಇರುವ ಪರಿಸ್ಥಿತಿಯ ಬಗ್ಗೆ ಪರಾಮರ್ಶೆ ನಡೆಸಲಾಯಿತು. ರಾಜ್ಯದಲ್ಲಿ ಡೆಲ್ಟಾ ವೈರಸ್ ಸದ್ಯಕ್ಕೆ ಹತೋಟಿಯಲ್ಲಿದ್ದು ವೈರಸ್ ಬಗ್ಗೆ ತೀವ್ರ ನಿಗಾ ಇಡಲು ಸೂಚನೆ ನೀಡಿದರು.
ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಎರಡನೇ ಅಲೆಯ ತೀವ್ರತೆ ಕಡಿಮೆಯಾಗದಿರುವ ಬಗ್ಗೆ ಸಭೆಯಲ್ಲಿ ಆತಂಕ ವ್ಯಕ್ತಪಡಿಸಲಾಯಿತು. ಹೀಗಾಗಿ ಎಚ್ಚರಿಕೆಯಿಂದ ಇರುವಂತೆ ರಾಜ್ಯದ ಜನರಿಗೆ ಮನವಿ ಮಾಡಲಾಯಿತು. ಅಪೌಷ್ಟಿಕತೆ ಇರುವ ಮಕ್ಕಳನ್ನು ಗುರುತಿಸಿ ಅವರಿಗೆ ಸೂಕ್ತ ಪೌಷ್ಟಿಕ ಆಹಾರ ಒದಗಿಸಿ ವೈದ್ಯಕೀಯ ನಿಗಾ ವಹಿಸಲು ಸಿಎಂ ನಿರ್ದೇಶನ ನೀಡಿದರು.
ಕಲ್ಯಾಣ ಮಂಟಪ, ರೆಸಾರ್ಟ್ ಮದುವೆಗೆ ಸಮ್ಮತಿ:
ಕಲ್ಯಾಣ ಮಂಟಪ, ಹೋಟೆಲ್, ಪಾರ್ಟಿ ಹಾಲ್ ಮತ್ತು ರೆಸಾರ್ಟ್ಗಳಲ್ಲಿ 40 ಜನಕ್ಕೆ ಸೀಮಿತಗೊಳಿಸಿ ಅನುಮತಿ ತೆಗೆದುಕೊಂಡು ವೈಯಕ್ತಿಕ ಪಾಸ್ಗಳೊಂದಿಗೆ ಸೋಮವಾರದಿಂದ ಜಾರಿಗೆ ಬರುವಂತೆ ಮದುವೆ ಸಮಾರಂಭಗಳಿಗೆ ಅನುಮತಿ ನೀಡುವಂತೆ ಸಿಎಂ ಸೂಚನೆ ನೀಡಿದರು.