ಬೆಂಗಳೂರು: ಕೋವಿಡ್-19 ಮಹಾಮಾರಿಯ ಪ್ರಭಾವ ತಿಂಗಳಿಂದ ತಿಂಗಳಿಗೆ ಹೆಚ್ಚುತ್ತಾ ಹೋಗುತ್ತಿದ್ದು, ಪರಿಸ್ಥಿತಿ ಬಿಗಡಾಯಿಸುತ್ತಿದೆ. ರಾಜ್ಯದ ಒಟ್ಟು ಪರಿಸ್ಥಿತಿಗಿಂತ ರಾಜಧಾನಿ ಬೆಂಗಳೂರಿನ ಪರಿಸ್ಥಿತಿ ಭಯಾನಕವಾಗಿದೆ. ನಗರದಲ್ಲಿ ಜುಲೈ-ಆಗಸ್ಟ್ ತಿಂಗಳಿಗಿಂತ ಸೆಪ್ಟೆಂಬರ್ ತಿಂಗಳಲ್ಲಿ ಅತಿ ಹೆಚ್ಚು ಪಾಸಿಟಿವ್ ಪ್ರಕರಣ ಹಾಗೂ ಮರಣ ಸಂಭವಿಸಿದೆ.
ಇನ್ನು ಅಕ್ಟೋಬರ್ ತಿಂಗಳಲ್ಲಿ ದೇಶದ ಬೇರೆ ಮಹಾನಗರಗಳಿಗೆ ಹೋಲಿಸಿದ್ರೆ ಬೆಂಗಳೂರೇ ಪ್ರಥಮ ಸ್ಥಾನದಲ್ಲಿದ್ದು, ಸಕ್ರಿಯ ಪ್ರಕರಣಗಳಲ್ಲಿಯೂ ಮೊದಲ ಸ್ಥಾನದಲ್ಲಿರುವುದು ಆತಂಕಕ್ಕೆ ಎಡೆಮಾಡಿದೆ. ಇಡೀ ರಾಜ್ಯದಲ್ಲಿ ಪಾಸಿಟಿವಿಟಿ ಪ್ರಮಾಣ ಶೇಕಡಾ 12.18 ರಷ್ಟಿದ್ದರೆ, ನಗರದಲ್ಲಿ ಶೇಕಡಾ 13.76 ರಷ್ಟಿದೆ.
ಆಗಸ್ಟ್ ತಿಂಗಳಲ್ಲಿ ಒಟ್ಟು 74,696 ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, ಸಪ್ಟೆಂಬರ್ ತಿಂಗಳಲ್ಲಿ 1,02,458 ಪಾಸಿಟಿವ್ ಕಂಡುಬಂದಿದೆ. ಅಕ್ಟೋಬರ್ ತಿಂಗಳ ಕೇವಲ ಏಳು ದಿನಕ್ಕೆ 29,578 ಪಾಸಿಟಿವ್ ಪ್ರಕರಣಗಳು ಕಂಡುಬಂದಿದೆ.
ಜನರಲ್ಲಿ ಕೊರೊನಾ ಕುರಿತು ಭಯ ಭೀತಿ ಕಡಿಮೆಯಾಗ್ತಿದ್ದಂತೆ, ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ ಗುಂಪುಗೂಡುತ್ತಿರುವುದರಿಂದ ಕೊರೊನಾ ಪಾಸಿಟಿವ್ ಸಂಖ್ಯೆಗಳು ಏರಿಕೆಯಾಗುತ್ತಲೇ ಇವೆ. ಇನ್ನೊಂದೆಡೆ ಪ್ರತಿನಿತ್ಯ ಕೊರೊನಾ ಸೋಂಕು ಪರೀಕ್ಷೆ 30 ಸಾವಿರಕ್ಕೂ ಹೆಚ್ಚು ಮಾಡುತ್ತಿರುವುದರಿಂದ ಪಾಸಿಟಿವ್ ಪ್ರಕರಣ ಹೆಚ್ಚು ಕಂಡುಬರುತ್ತಿದೆ ಎಂದು ಬಿಬಿಎಂಪಿ ಆಯುಕ್ತರು ಹೇಳುತ್ತಿದ್ದಾರೆ.
ಆದರೆ ಕೊರೊನಾ ಪಾಸಿಟಿವ್ ರೋಗಿಗಳಿಗೆ ಗಂಭೀರ ಆರೋಗ್ಯ ಸಮಸ್ಯೆಗಳ ಲಕ್ಷಣಗಳು ಕಂಡುಬರುತ್ತಿವೆ. ಕೇವಲ ಶ್ವಾಸಕೋಶ ಅಲ್ಲದೆ, ರಕ್ತನಾಳಗಳಿಗೂ ಈ ಸೋಂಕಿನಿಂದ ಗಂಭೀರ ಸಮಸ್ಯೆಗಳಾಗುತ್ತಿವೆ. ಈಗ ಹೃದಯ, ಶ್ವಾಸಕೋಶ, ಮೆದುಳು, ಜಠರದ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಇದೆ. ಕೊರೊನಾ ನೆಗೆಟಿವ್ ಬಂದು ಆಸ್ಪತ್ರೆಯಿಂದ ಡಿಶ್ಚಾರ್ಜ್ ಆದ ಬಳಿಕವೂ ಪ್ರತೀ ತಿಂಗಳು ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುವ ಅನಿವಾರ್ಯತೆ ಬಂದಿದೆ. ಹೀಗಾಗಿ ಜನರಿಗೆ ನಿರ್ಲಕ್ಷ್ಯ ಬೇಡ ಎಂದು ತಜ್ಞ ವೈದ್ಯರು ಪದೇ ಪದೇ ಎಚ್ಚರಿಸುತ್ತಿದ್ದಾರೆ. ರಕ್ತದಲ್ಲಿ ಆಮ್ಲಜನಕದ ಪ್ರಮಾಣದಲ್ಲಿ ಕುಸಿತವಾಗಿ ನ್ಯುಮೋನಿಯಾ, ಶ್ವಾಸಕೋಶದ ಸಮಸ್ಯೆ, ಇನ್ನು ರಕ್ತಹೆಪ್ಪುಗಟ್ಟುವಿಕೆಯಿಂದ ಮೆದುಳಿನ ಆಘಾತಕ್ಕೆ ಕಾರಣವಾಗುತ್ತಿವೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿದ, ಸೀನಿಯರ್ ಸರ್ಜನ್, ಡಾ.ಟಿ.ಹೆಚ್ ಆಂಜನಪ್ಪ, ಇದು ಬರೀ ಶ್ವಾಸಕೋಶದ ಖಾಯಿಲೆ ಮಾತ್ರ ಅಲ್ಲ. ಕೊರೊನಾ ವೈರಸ್ ಬೇರೆ ಬೇರೆ ಖಾಯಿಲೆಗಳಿಗೂ ಕಾರಣವಾಗ್ತಿದೆ, ರಕ್ತನಾಳಗಳಿಗೂ ಸೋಂಕು ತಗುಲಿ, ಹಾರ್ಟ್ ಅಟ್ಯಾಕ್, ಸ್ಟ್ರೋಕ್ ಮುಂತಾದ ಗಂಭೀರ ಸಮಸ್ಯೆ ಉಂಟಾಗುತ್ತಿದೆ. ಪಾಸಿಟಿವ್ ಬಂದವರಲ್ಲಿ ರಕ್ತ ಹೆಪ್ಪುಗಟ್ಟದಂತೆ ಎಚ್ಚರಿಕೆ ತೆಗೆದುಕೊಳ್ಳಲಾಗ್ತಿದೆ. ಇದಕ್ಕೆ ರೆಮಿಡಿಸೈವರ್ ಮುಂತಾದ ಚಿಕಿತ್ಸೆ ನೀಡಲಾಗ್ತಿದೆ ಎಂದರು.
ಗುಣಮುಖರಾದರೂ ಈ ಆರೋಗ್ಯದ ಸಮಸ್ಯೆಗಳು ಬರುವ ಸಾಧ್ಯತೆ ಇದೆ. ಜನರು ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕಿದೆ. ತಜ್ಞರಿಗೆ ಈ ವೈರಸ್ ಕುರಿತು ಏಳೆಂಟು ತಿಂಗಳ ಬಳಿಕ ಗೊತ್ತಾದ ವಿಚಾರ ಇದು ಕೇವಲ ಶ್ವಾಸಕೋಶಕ್ಕೆ ಅಷ್ಟೇ ಅಲ್ಲ, ರಸ್ತನಾಳಗಳಿಗೂ ತೊಂದರೆ ಉಂಟುಮಾಡುತ್ತೆ. ಮುಂದೆಯೂ ಉಸಿರಾಟದ ಸಮಸ್ಯೆ ಬರಬಹುದು. ಹಾಗಾಗಿ ವೈರಸ್ ಬಗ್ಗೆ ಭಯ ಬೇಡ, ಆದರೆ ಎಚ್ಚರಿಕೆ ಅತ್ಯಂತ ಮುಖ್ಯ ಎಂದು ತಿಳಿಸಿದ್ದಾರೆ.
ಕೊರೊನಾ ಪಾಸಿಟಿವ್ ಹಾಗೂ ಸಾವಿನ ಸಂಖ್ಯೆಯ ತಿಂಗಳ ಅಂಕಿ-ಅಂಶ ವಿವರ
ತಿಂಗಳು | ಪಾಸಿಟಿವ್ ಸಂಖ್ಯೆ | ಸಾವು |
ಮೇ | 386 | 12 |
ಜೂನ್ | 4,904 | 83 |
ಜುಲೈ | 52,106 | 962 |
ಆಗಸ್ಟ್ | 74,696 | 950 |
ಸೆಪ್ಟೆಂಬರ್ | 1,02,458 | 971 |
ಅಕ್ಟೋಬರ್ | 29,578 | 254 |
ಒಟ್ಟು | 2,62,241 | 3,191 |
ಅಕ್ಟೋಬರ್ ತಿಂಗಳಲ್ಲಿ ಕೋವಿಡ್ ಪಾಸಿಟಿವ್ ಗರಿಷ್ಠ ಏರಿಕೆ: ಕೇವಲ ಏಳು ದಿನದಲ್ಲೇ ನಗರದಲ್ಲಿ ಅ.1 ರಿಂದ 7 ರವರೆಗೆ 29,578 ಕೋವಿಡ್ ಪಾಸಿಟಿವ್ ಕಂಡುಬಂದಿದೆ. ಕಳೆದ ಎರಡು ದಿನದಿಂದ ಬೆಂಗಳೂರಲ್ಲಿ ಐದು ಸಾವಿರಕ್ಕೂ ಹೆಚ್ಚು ಪ್ರಕರಣ ದೃಢಪಡುತ್ತಿದೆ. ದೆಹಲಿ, ಪೂನಾ, ಮುಂಬೈನಲ್ಲಿ 3 ಸಾವಿರದ ಆಸುಪಾಸಿನಲ್ಲಿ ಕೊರೊನಾ ವರದಿಯಾಗ್ತಿದೆ. ಆದ್ರೆ ಬೆಂಗಳೂರು ಈ ನಗರಗಳನ್ನು ಹಿಂದಿಕ್ಕಿದೆ. ನಗರದಲ್ಲಿ ಅ. 1 ರಿಂದ 7 ರವರೆಗೆ 2,16,739 ಸೋಂಕು ಪರೀಕ್ಷೆ ನಡೆದಿದೆ. ಸಕ್ರಿಯ ಪ್ರಕರಣದಲ್ಲಿ ದೇಶದಲ್ಲೇ ಮೊದಲ ಸ್ಥಾನ ಬೆಂಗಳೂರು ಇದೆ. ಪೂನಾ 57926 ಅನ್ನು ಹಿಂದಿಕ್ಕಿ, ಬೆಂಗಳೂರು ಸಕ್ರಿಯ ಪ್ರಕರಣ 58,624 ಕ್ಕೆ ಏರಿಕೆಯಾಗಿದೆ. ಇನ್ನು ಒಟ್ಟು ಅತಿಹೆಚ್ಚು ಕೋವಿಡ್ ಪಾಸಿಟಿವ್ ನಗರಗಳ ಪಟ್ಟಿಯಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು ಎರಡನೇ ಸ್ಥಾನದಲ್ಲಿದೆ.
ಅಕ್ಟೋಬರ್ ತಿಂಗಳ ಕೋವಿಡ್ ರಿಪೋರ್ಟ್
ನಗರ | ಪಾಸಿಟಿವ್ ಸಂಖ್ಯೆ | ಸಾವು | ಸಕ್ರಿಯ ಪ್ರಕರಣ |
ಬೆಂಗಳೂರು | 29,578 | 254 | 58,624 |
ದೆಹಲಿ | 21,782 | 255 | 22,186 |
ಪೂನಾ | 15,370 | 260 | 57,926 |
ಮುಂಬೈ | 14,693 | 276 | 2,65,444 |