ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ದಿನೇ ದಿನೆ ನಿಯಂತ್ರಣ ಮೀರಿ ಕೋವಿಡ್ ಪ್ರಕರಣಗಳು ದೃಢಪಡುತ್ತಿರುವುದರಿಂದ ಮತ್ತೆ ನಿಯಂತ್ರಣ ಹೇರಲು ಪಾಲಿಕೆ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಆಯುಕ್ತ ಮಂಜುನಾಥ್ ಪ್ರಸಾದ್, ಅಪಾರ್ಟ್ಮೆಂಟ್ಗಳಲ್ಲಿರುವ ಕಾಮನ್ ಏರಿಯಾಗಳು, ಪಾರ್ಟಿ ಹಾಲ್, ಜಿಮ್, ಸ್ವಿಮ್ಮಿಂಗ್ ಪೂಲ್ಗಳನ್ನು ಬಂದ್ ಮಾಡಬೇಕು. ಬಿಬಿಎಂಪಿ ಪಾರ್ಕ್ಗಳಲ್ಲಿರುವ ಜಿಮ್ಗಳನ್ನು ಬಂದ್ ಮಾಡಬೇಕು. ಸಿನಿಮಾ ಮಂದಿರಗಳಲ್ಲಿ ಶೇ 100 ಜನ ಇರಲು ಅವಕಾಶ ಇರುವುದರಿಂದ ಕೋವಿಡ್ ಹರಡಬಹುದು, ಇದನ್ನು ಶೇ 50ಗೆ ಇಳಿಸಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದ್ದೇವೆ ಎಂದರು.
ಇನ್ನು ಮದುವೆ ಹಾಲ್ಗಳ ತೆರೆದ ಜಾಗಗಳಿಗೆ 500, ಬಂದ್ ಆಗಿರುವ ಜಾಗಕ್ಕೆ 200 ಜನಕ್ಕೆ ಮಾತ್ರ ಅವಕಾಶ ಇದ್ದು, ಮದುವೆ ಹಾಲ್ ಮಾಲೀಕರೇ ಇದಕ್ಕೆ ಜವಾಬ್ದಾರರು ಎಂದರು. ತಪ್ಪಿದ್ದಲ್ಲಿ ಪ್ರಕರಣ ಕೂಡಾ ದಾಖಲಿಸಲಾಗುತ್ತದೆ. ಇನ್ನು ಮಾಲ್‌ಗಳಲ್ಲಿ ಎಲ್ಲಾ ಕಡೆ ಮಾರ್ಷಲ್ಸ್ ಇರಲು ಸಾಧ್ಯವಿಲ್ಲ. ಹಾಗಾಗಿ ಜನ ಮಾಸ್ಕ್ ಹಾಕದೇ ಬಂದಾಗ ಮಾಲ್ ಮಾಲೀಕರು, ಮಳಿಗೆಗಳ ಮಾಲೀಕರೇ ಜವಾಬ್ದಾರರಾಗ್ತಾರೆ. ನಗರದಲ್ಲಿ ಹಲವಾರು ವಸ್ತು ಪ್ರದರ್ಶನಗಳು ಆಗ್ತಿವೆ. ಇಲ್ಲಿಯೂ ಕೋವಿಡ್ ನಿಯಮ ಪಾಲನೆ ಬಹುಮುಖ್ಯ ಎಂದರು.
ಸಂಪರ್ಕ ಪತ್ತೆಗೆ ಹದಿನೈದು ಜನ
ಮುಂದಿನ ಒಂದು ವಾರದಲ್ಲಿ ಟೆಸ್ಟ್ ಅನ್ನು 50 ಸಾವಿರಕ್ಕೆ ಹೆಚ್ಚಳ ಮಾಡಲಾಗುವುದು ಎಂದ ಅವರು, ಸದ್ಯ 12 ಕ್ಲಸ್ಟರ್ಗಳಿದ್ದು ಎಲ್ಲರಿಗೂ ಟೆಸ್ಟ್ ಮಾಡಲಾಗುತ್ತಿದೆ. ಪಾಸಿಟಿವ್ ಕಂಡು ಬಂದ ವ್ಯಕ್ತಿಯ ಕಾಂಟ್ಯಾಕ್ಟ್ ಟ್ರೇಸಿಂಗ್ಗಾಗಿ ಶಿಕ್ಷಕರು, ಕಂದಾಯ, ಆರೋಗ್ಯ, ಇಂಜಿನಿಯರ್ ವಿಭಾಗದ ಅಧಿಕಾರಿ, ನೌಕರರನ್ನು ನೇಮಕ ಮಾಡಿ ಒಟ್ಟು ಒಂದು ಪ್ರಕರಣಕ್ಕೆ ಹದಿನೈದು ಜನರನ್ನು ನೇಮಿಸಲಾಗ್ತಿದೆ. ಎಲ್ಲೆಲ್ಲಿ ಓಡಾಟ, ಯಾರ್ಯಾರ ಸಂಪರ್ಕ ಇದೆಯೋ ಎಲ್ಲರ ಟೆಸ್ಟಿಂಗ್ ಮಾಡಲಾಗುತ್ತದೆ ಎಂದರು.
ಈಗಾಗಲೇ 80 ಸಾವಿರ ಜನರಿಗೆ ವ್ಯಾಕ್ಸಿನ್ ಕೊಡುವ ವ್ಯವಸ್ಥೆ ಮಾಡಲಾಗಿದೆ. ಆಶಾ ಕಾರ್ಯಕರ್ತೆಯರಿಗೆ ಸ್ಲಂ, ಅಕ್ಕಪಕ್ಕದ ಜನರನ್ನು ಕರೆದುಕೊಂಡು ಬರುವ ಜವಾಬ್ದಾರಿ ನೀಡಲಾಗಿದೆ ಎಂದು ಅವರು ವಿವರಿಸಿದರು.
ದೇವಸ್ಥಾನ, ಮದುವೆ ಸುತ್ತಾಟದಿಂದ ಕೋವಿಡ್
ಟ್ರಾವೆಲ್ ಹಿಸ್ಟರಿಯಿಂದ, ಬೇರೆ ರಾಜ್ಯಗಳಿಗೆ ಹೋಗಿ ಬರುವವರು ಹಾಗೂ ಮದುವೆ, ದೇವಸ್ಥಾನಗಳಿಗೆ ಹೋಗಿ ಬರುವವರಿಂದಲೇ ಕೋವಿಡ್ ಹರಡುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಅಪಾರ್ಟ್ ಮೆಂಟ್ ಗಳಲ್ಲೇ ಹೆಚ್ಚು ಟೆಸ್ಟ್ ಮಾಡಲಾಗುತ್ತಿದೆ. ಸ್ಲಂ ಗಳಲ್ಲಿ ಹೆಚ್ಚು ಪ್ರಕರಣ ಬರುತ್ತಿಲ್ಲ ಎಂದು ಅಯುಕ್ತರು ತಿಳಿಸಿದರು.
198 ಆಂಬ್ಯುಲೆನ್ಸ್ಗಳ ಸಿದ್ಧತೆ- ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಸಜ್ಜು
ಕೋವಿಡ್ ಮಿತಿಮೀರಿ ಹರಡುತ್ತಿರುವುದರಿಂದ ಸೋಂಕು ಲಕ್ಷಣಗಳಿರುವ ಜನರನ್ನು ಬೇಗ ಆಸ್ಪತ್ರೆಗೆ ತಲುಪಿಸಲು, 198 ವಾರ್ಡ್ ಗಳಿಗೆ 198 ಆಂಬ್ಯುಲೆನ್ಸ್ಗಳನ್ನು ಬಾಡಿಗೆಗೆ ಪಡೆಯಲಾಗುವುದು. ಈ ಬಗ್ಗೆ ಸರ್ಕಾರಕ್ಕೆ ವರದಿ ಕಳಿಸಿ 150 ಕೋಟಿ ರೂ ಕೇಳಲಾಗಿದೆ. ಇನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಸದ್ಯ ಬೆಡ್ ವ್ಯವಸ್ಥೆಗಳಿದ್ದು, ಯಾವುದೇ ಸಮಸ್ಯೆ ಆಗುವುದಿಲ್ಲ. ಹೆಚ್ಚು ಪ್ರಕರಣ ಕಂಡುಬಂದರೆ ಖಾಸಗಿ ಆಸ್ಪತ್ರೆಗಳು ಸಿದ್ಧವಾಗಿರುತ್ತವೆ ಎಂದರು.