ಬೆಂಗಳೂರು: ಒಂದೆಡೆ ಲಾಕ್ಡೌನ್ ಸಡಿಲಿಕೆಯಾಗಿ ದೈನಂದಿನ ವ್ಯಾಪಾರ ಚಟುವಟಿಕೆ ಶುರುವಾಗಿದೆ. ಇದರ ಜೊತೆ ಪೊಲೀಸರು ಕೂಡ ಭದ್ರತೆಯಲ್ಲಿ ನಿರತರಾಗುತ್ತಿದ್ದು, ಕೊರೊನಾ ಸೋಂಕು ಬಿಟ್ಟು ಬಿಡದೆ ಕಾಡಲು ಶುರುವಾಗಿದೆ.
ಕೋವಿಡ್ ಸೋಂಕು ನಗರದಲ್ಲಿ ಸದ್ದಿಲ್ಲದೆ ಹಬ್ಬುತ್ತಿದ್ದು, ಕೊರೊನಾ ವಾರಿಯರ್ ಆಗಿ ಕೆಲಸ ಮಾಡಿದ ಸುಮಾರು 23 ಪೊಲೀಸ್ ಸಿಬ್ಬಂದಿಯನ್ನು ಬಲಿ ಪಡೆದುಕೊಂಡಿದ್ದು, 3041 ಮಂದಿಗೆ ಸೋಂಕು ತಗುಲಿದೆ. ಇಲ್ಲಿಯವರೆಗೆ 2,011 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾದ್ರೆ, 907 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಲ್ಲೆಡೆ ದೈನಂದಿನ ವ್ಯಾಪಾರ ಮಾಮೂಲಿನಂತೆ ನಡೆಯುತ್ತಿದ್ದು, ಜನರು ಕೂಡ ತಮ್ಮ ಕೆಲಸಗಳಿಗೆ ತೆರಳುತ್ತಿರುವ ಕಾರಣ ಭದ್ರತೆ ದೃಷ್ಟಿಯಿಂದ ಪೊಲೀಸರು ಎಲ್ಲೆಡೆ ಅಲರ್ಟ್ ಆಗಿರಬೇಕಾಗುತ್ತದೆ. ಇದರ ನಡುವೆ ರೈತರು ಸೇರಿದಂತೆ ಕೆಲವರು ನಡೆಸುತ್ತಿರುವ ಪ್ರತಿಭಟನೆ ಸಮಯದಲ್ಲಿ ಭದ್ರತೆಗೆ ಪೊಲೀಸರು ನಿಯೋಜನೆಗೊಳ್ಳುವುದು ಅನಿವಾರ್ಯವಾಗಿದೆ. ಆದರೆ ಪೊಲಿಸರು ಎಷ್ಟೇ ಜಾಗ್ರತರಾಗಿದ್ದರೂ ಕೋವಿಡ್ ಸೋಂಕಿಗೆ ತುತ್ತಾಗುತ್ತಿದ್ದಾರೆ.
ಕೊರೊನಾ ಸೋಂಕು ಕಂಡುಬಂದ ಸಿಬ್ಬಂದಿಗೆ ಕಡ್ಡಾಯವಾಗಿ ಚಿಕಿತ್ಸೆ ಪಡೆಯುವಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚಿಸಿದ್ದಾರೆ. ಕೆಲವರು 6 ದಿನ ಚಿಕಿತ್ಸೆ ಪಡೆದು ಗುಣಮುಖರಾಗಿ ಹೊರಗಡೆ ಬಂದು 18 ದಿನ ಅಥವಾ 28 ದಿನಗಳ ಕ್ವಾರಂಟೈನ್ ಮುಗಿಸಿ ಮತ್ತೆ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಹಾಗೆ ಸೋಂಕಿತರ ಸಂಪರ್ಕದಲ್ಲಿ ಇದ್ದವರನ್ನೂ ಕ್ವಾರಂಟೈನ್ಗೆ ಒಳಪಡಿಸಿ ಮುಂಜಾಗ್ರತ ಕ್ರಮ ಕೈಗೊಳ್ಳುತ್ತಿದ್ದಾರೆ.