ಬೆಂಗಳೂರು: ಕೋವಿಡ್-19 ಹಿನ್ನೆಲೆ ಜನರ ಸ್ಯಾಂಪಲ್ ಸಂಗ್ರಹಿಸುವುದು ಅತ್ಯಂತ ಸವಾಲಿನ ಸಂಗತಿಯಾಗಿತ್ತು. ಈ ಸವಾಲು ಹಾಗೂ ಸಮಸ್ಯೆಯನ್ನು ಸಂಚಾರಿ ಘಟಕ ನಿವಾರಿಸುವ ವಿಶ್ವಾಸವಿದೆ ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ವಿಪ್ರೋ ಜಿ ಸಂಸ್ಥೆಯವರು ರಾಜ್ಯ ಸರ್ಕಾರಕ್ಕೆ ಕೊಡುಗೆಯಾಗಿ ನೀಡಿದ 15 ಸಂಚಾರಿ ಸ್ಮಾರ್ಟ್ ಕಿಯೋಸ್ಕ್ಗಳ ಉದ್ಘಾಟನಾ ಸಮಾರಂಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ರೋಗಿಗಳ ತಪಾಸಣೆ ವೇಳೆ ರೋಗವು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೂ ತಗುಲುವ ಸಾಧ್ಯತೆ ಇರುವ ಹಿನ್ನೆಲೆ ಇದನ್ನು ತಪ್ಪಿಸುವ ಮಾದರಿಯ ಕಿಯೋಸ್ಕ್ಗಳನ್ನು ವಿಪ್ರೋ ಸಂಸ್ಥೆ ಸಿದ್ಧಪಡಿಸಿ ನೀಡಿದೆ. ಈ ಮೂಲಕ ರೋಗಿ ಒಂದು ಭಾಗದಲ್ಲಿ ಹಾಗೂ ತಪಾಸಣೆ ನಡೆಸುವ ವೈದ್ಯರು ಇನ್ನೊಂದು ಭಾಗದಲ್ಲಿ ಇರುತ್ತಾರೆ ಎಂದರು.
ಇದರಿಂದಾಗಿ ರೋಗಿಯ ಗಂಟಲು ದ್ರವದ ಮಾದರಿ ಸಂಗ್ರಹಿಸುವುದು ಇನ್ನೂ ಸುಲಭವಾಗಲಿದೆ. ಅಲ್ಲದೆ ರೋಗಿ ಹಾಗೂ ವೈದ್ಯರು ಪರಸ್ಪರ ಸಂಪರ್ಕಕ್ಕೆ ಬರುವುದಿಲ್ಲ. ಅಲ್ಲದೆ ಪಿಪಿಇ ಕಿಟ್ಗಳ ಹೇರಳ ಬಳಕೆಯ ಅಗತ್ಯವನ್ನು ಕೂಡಾ ಇದು ಕಡಿಮೆ ಮಾಡಲಿದೆ. ಅಲ್ಲದೇ ಜನರು, ವೈದ್ಯರು ರೋಗಕ್ಕೆ ತುತ್ತಾಗುತ್ತೇವೆ ಎಂಬ ಆತಂಕ ನಿವಾರಿಸಲಿದೆ. ಒಟ್ಟು 15 ಕಿಯೋಸ್ಕ್ ಇದ್ದು, ಜಿಲ್ಲಾ ಆಸ್ಪತ್ರೆಗಳಿಗೆ ಕಳಿಸಿಕೊಡುವ ಕಾರ್ಯ ಮಾಡುತ್ತೇವೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಗೈಡ್ ಲೈನ್ಸ್ ನಿರೀಕ್ಷೆ....
ಈಗಾಗಲೇ ನಾಲ್ಕನೇ ಹಂತದ ಲಾಕ್ಡೌನ್ ಮುಂದುವರಿದಿದ್ದು, ಐದನೇ ಹಂತಕ್ಕೆ ಕೇಂದ್ರ ಸರ್ಕಾರದಿಂದ ಯಾವ ಮಾದರಿಯ ಮಾರ್ಗಸೂಚಿಗಳು ಬರಲಿವೆ ಎನ್ನುವುದನ್ನು ಕಾದು ನೋಡುತ್ತಿದ್ದೇವೆ. ಬಹುತೇಕ ಎಲ್ಲಾ ಕ್ಷೇತ್ರಗಳಿಗೂ ನಿರಾಳತೆ ಸಿಗಲಿದೆ ಎಂಬ ವಿಶ್ವಾಸವಿದೆ. ಎಲ್ಲಾ ಕ್ಷೇತ್ರಗಳಿಗೂ ಅಡೆತಡೆ ಇಲ್ಲದೆ ವ್ಯಾಪಾರ-ವಹಿವಾಟು ನಡೆಸಿಕೊಂಡು ಹೋಗಲು ಅನುಕೂಲವಾಗುವ ಮಾರ್ಗಸೂಚಿ ಬರಲಿದೆ ಎಂಬ ನಿರೀಕ್ಷೆ ಇದೆ ಎಂದರು.
ನಂತರ ಮಾತು ಮುಂದುವರೆಸಿ, ವೈರಸ್ ನಮ್ಮೊಂದಿಗೆ ಶಾಶ್ವತವಾಗಿ ಇರುವಂತದ್ದು. ಲಾಕ್ಡೌನ್ ಸಂದರ್ಭದಲ್ಲಿ ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕಿತ್ತು ಅದನ್ನು ಮಾಡಿದ್ದೇವೆ. ಲಾಕ್ಡೌನ್ ಆರಂಭಕ್ಕೆ ಮುನ್ನ ರಾಜ್ಯದಲ್ಲಿ ಕೇವಲ ಎರಡು ಲ್ಯಾಬ್ಗಳು ಮಾತ್ರ ಇದ್ದವು. ಅದು 60ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಗಳಿಂದ 6000 ಬೆಡ್ವರೆಗೂ ಸಮಸ್ಯೆ ಆಗದ ರೀತಿ ವ್ಯವಸ್ಥೆ ಕಲ್ಪಿಸಿಕೊಳ್ಳಲಾಗಿದೆ. ಎಲ್ಲಾ ಸವಲತ್ತುಗಳು ರಾಜ್ಯದಲ್ಲಿದೆ. ಸಮಸ್ಯೆ ಆಗದ ರೀತಿ ಕೊರೊನಾ ನಿಭಾಯಿಸುತ್ತೇವೆ. ಈ ಸಂದರ್ಭದಲ್ಲಿ ನಾವು ರೋಗವನ್ನು ಎದುರಿಸಲು ಸಕಲ ರೀತಿಯಲ್ಲಿ ಸಜ್ಜಾಗಿದ್ದೇವೆ. ಮುಂದೆ ಕೂಡ ಯಾವುದೇ ರೀತಿಯ ಸಮಸ್ಯೆ ಬಂದರೂ ಎದುರಿಸಲು ಸಿದ್ಧವಿದ್ದೇವೆ. ಜನ ಹೆದರುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.
ರಾಜ್ಯ ಸರ್ಕಾರ ಘೋಷಿಸಿರುವ 5,000 ರೂಪಾಯಿ ಸಹಾಯಧನ ಎಲ್ಲರನ್ನು ತಲುಪಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿ, ಹಿಂದುಳಿದ ವರ್ಗದ ಇಲಾಖೆ ಕಾರ್ಯದರ್ಶಿ ಹಾಗೂ ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿದ್ದು, ತಕ್ಷಣ ಗೈಡ್ ಲೈನ್ಗಳನ್ನು ಬಿಡುಗಡೆ ಮಾಡುವಂತೆ ತಿಳಿಸಿದ್ದೇನೆ. ಆದಷ್ಟು ಬೇಗ ಇರುವ ತೊಡಕನ್ನು ನಿವಾರಿಸಿ ಹಣ ತಲುಪಿಸುವ ಸೂಚನೆ ನೀಡಿದ್ದೇನೆ ಎಂದರು.
ಶೇ. 15ರಷ್ಟು ಸಮುದಾಯಗಳು ಸಹಾಯಧನ ವ್ಯಾಪ್ತಿಯಿಂದ ತಪ್ಪಿ ಹೋಗಿವೆ. ಅವುಗಳನ್ನು ಸೇರ್ಪಡೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮನವಿ ಮಾಡಿದ್ದೇನೆ. ಪ್ರತಿಯೊಬ್ಬರಿಗೂ ಯಾವುದಾದರೂ ಒಂದು ರೀತಿಯಲ್ಲಿ ಅನುಕೂಲ ಮಾಡಿ ಹಣ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ. ಹೆಚ್ಚುವರಿ ಸೌಕರ್ಯ ಕಲ್ಪಿಸಿ ಎಲ್ಲರಿಗೂ ಆರ್ಥಿಕ ಸಹಕಾರ ನೀಡುತ್ತೇವೆ ಎಂದು ವಿವರಿಸಿದರು.