ಬೆಂಗಳೂರು: ಕೋವಿಡ್ ಪಿಡುಗು ದೇಶದ ಮೇಲೆರಗಿದಾಗ ಯಾವುದೇ ಲಸಿಕೆ ಲಭ್ಯವಿರಲಿಲ್ಲ. ಕಂಡು, ಕೇಳರಿಯದಂತಹ ಸವಾಲು ನಮ್ಮ ಮುಂದಿತ್ತು. ಕೇವಲ 10 ತಿಂಗಳಷ್ಟೇ ನಮಗೆ ಸಮಯವಿತ್ತು. ಆದರೆ, ಮಿಂಚಿನ ವೇಗದಲ್ಲಿ ಕೆಲಸ ಮಾಡಿದ ನಾವು ಕೊವ್ಯಾಕ್ಸಿನ್ ಲಸಿಕೆಯನ್ನು (Covaxin vaccine) ಅಭಿವೃದ್ಧಿಪಡಿಸಿದೆವು. ಇದು ನಿಜಕ್ಕೂ ಸವಾಲಿನಿಂದ ಕೂಡಿದ್ದ ಮತ್ತು ಅನನ್ಯ ಅನುಭವ ಎಂದು ಭಾರತ್ ಬಯೋಟೆಕ್ ಕಂಪನಿಯ ನಿರ್ದೇಶಕ ಡಾ.ವಿ.ಕೃಷ್ಣಮೋಹನ್ ಹೇಳಿದ್ದಾರೆ.
ಬೆಂಗಳೂರು ತಂತ್ರಜ್ಞಾನ ಶೃಂಗಸಭೆ (Bengaluru Technology Summit)ಯಲ್ಲಿ ಗುರುವಾರ ನಡೆದ ಕೋವಿಡ್ ಲಸಿಕೆಯಲ್ಲಿ ಭಾರತದ ನಾಯಕತ್ವ ಗುಣದ ಪ್ರದರ್ಶನ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಂವಾದಕ್ಕೆ ಚಾಲನೆ ನೀಡಿದ ಡಾ. ಮಹೇಶ್ ಬಾಲಘಾಟ್, ಕೊವ್ಯಾಕ್ಸಿನ್ ಅಭಿವೃದ್ಧಿಯ ಪಯಣದ ಏಳು-ಬೀಳುಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. 'ಕೇಂದ್ರ ಸರ್ಕಾರ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಸರಿಯಾದ ಹೆಜ್ಜೆಗಳನ್ನಿಟ್ಟಿತು. ಜೈವಿಕ ತಂತ್ರಜ್ಞಾನ ಇಲಾಖೆಯು ಮೈಕೊಡವಿಕೊಂಡು ಎದ್ದಿತು. ಕೆಲವು ವರ್ಷಗಳ ಹಿಂದೆ ಇಂತಹುದನ್ನು ನಾವು ಕಂಡು ಕೇಳರಿಯುವುದು ಸಾಧ್ಯವಿರಲಿಲ್ಲ' ಎಂದರು.
'ಕೊವ್ಯಾಕ್ಸಿನ್ ಲಸಿಕೆಯನ್ನು ದೇಶದಲ್ಲೇ ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ, ಉತ್ಪಾದಿಸುವ ಗುರಿ ಭಾರತ್ ಬಯೋಟೆಕ್ ಕಂಪನಿಯ ಮುಂದೆ ಇತ್ತು. ಇದಕ್ಕಾಗಿ ಪಟ್ಟಿರುವ ಪರಿಶ್ರಮಕ್ಕೆ ಬೆಲೆ ಕಟ್ಟುವುದು ಸಾಧ್ಯವಿಲ್ಲ. ಆದರೆ, ಲಸಿಕೆ ಉತ್ಪಾದನೆಯಲ್ಲಿ ಗುಣಮಟ್ಟದೊಂದಿಗೆ ಯಾವುದೇ ರಾಜಿ ಮಾಡಿಕೊಂಡಿಲ್ಲ. ಒಟ್ಟಿನಲ್ಲಿ ದಾಖಲೆ ಸಮಯದಲ್ಲಿ ನಾವು ಕೋಟ್ಯಂತರ ಜನರ ಜೀವವನ್ನು ಉಳಿಸಬಲ್ಲ ಕೋವ್ಯಾಕ್ಸಿನ್ ಲಸಿಕೆಯು ಸುಲಭವಾಗಿ ಸಿಗುವಂತೆ ಮಾಡಿದೆವು' ಎಂದು ತಿಳಿಸಿದರು.
ಭಾರತದ ವೈದ್ಯಕೀಯ ನಿಯಂತ್ರಣ ವ್ಯವಸ್ಥೆ ಕಳೆದ 10 ವರ್ಷಗಳಲ್ಲಿ ಸಕಾರಾತ್ಮಕವಾಗಿ ಬದಲಾಗಿದೆ. ಕೇಂದ್ರ ಸರ್ಕಾರವು ಈಗ ಲಸಿಕೆ ಅಭಿವೃದ್ಧಿ ಯೋಜನೆಗಳಿಗೆ ಕನಿಷ್ಠ 50 ಲಕ್ಷ ರೂ. ಗಳಿಂದ ಹಿಡಿದು ಗರಿಷ್ಠ 50 ಕೋಟಿ ರೂ. ಗಳವರೆಗೂ ನೆರವು ನೀಡುತ್ತಿದೆ. ಆದ್ದರಿಂದ, ಈಗ ಔಷಧ ತಯಾರಿಕೆ ಕಂಪನಿಗಳು ಸರಿಯಾದ ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದು ಕೃಷ್ಣ ಮೋಹನ್ ಪ್ರತಿಪಾದಿಸಿದರು.
'ಕೋವಿಡ್ ಒಳ್ಳೆಯ ಪಾಠ'
ಸಂವಾದದಲ್ಲಿ ಪಾಲ್ಗೊಂಡಿದ್ದ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಸಿಇಒ ಡಾ. ದೀಪಕ್ ಸಪ್ರಾ ಮಾತನಾಡಿ, ಕೋವಿಡ್ ಸಂದರ್ಭ ನಮ್ಮೆಲ್ಲರಿಗೂ ಒಳ್ಳೆಯ ಪಾಠ ಕಲಿಸಿತು. ರಷ್ಯಾದ ಕಂಪನಿಗಳಿಂದ ಸಿಕ್ಕಿದ ಸಹಭಾಗಿತ್ವದಿಂದಾಗಿ ನಾವು ಸ್ಪುಟ್ನಿಕ್ ಲಸಿಕೆಯನ್ನು ಅಭಿವೃದ್ಧಿಪಡಿಸುವುದು ಸಾಧ್ಯವಾಯಿತು. ಇದರಿಂದ ಭಾರತದ ಜೊತೆಗೆ ಇತರ ಅಭಿವೃದ್ಧಿಶೀಲ ದೇಶಗಳಿಗೂ ನೆರವಾಯಿತು. ಆದರೆ, ಸಂಶೋಧನೆ ಮತ್ತು ಅಭಿವೃದ್ಧಿಯ ವಿಚಾರದಲ್ಲಿ ಭಾರತ ಕ್ರಮಿಸಬೇಕಾದ ಹಾದಿ ಬಹಳಷ್ಟಿದೆ ಎಂದು ಅಭಿಪ್ರಾಯಪಟ್ಟರು.
ಭಾರತವನ್ನು ಇಡೀ ಜಗತ್ತಿನ ಲಸಿಕೆ ವಲಯವನ್ನಾಗಿಸುವ ಉಜ್ವಲ ಅವಕಾಶ ಈಗ ನಮ್ಮ ಮುಂದಿದೆ. ಭಾರತ್ ಬಯೋಟೆಕ್ ಕಂಪನಿಯು ಈ ಸಾಧ್ಯತೆಯನ್ನು ನಮಗೆ ತೋರಿಸಿಕೊಟ್ಟಿದೆ ಎಂದರು.
'ದೇಶದಲ್ಲಿ ವಿಜ್ಞಾನ ಪ್ರತಿಭೆಗಳಿಗೆ ಕೊರತೆ ಇಲ್ಲ'
ಅರಬಿಂದೋ ಫಾರ್ಮಾದ ಹಿರಿಯ ಉಪಾಧ್ಯಕ್ಷೆ ಡಾ.ದಿವ್ಯಾ ಬಿಜಲ್ವಾನ್ ಸಂವಾದದಲ್ಲಿ ಮಾತನಾಡಿ, 'ದೇಶದಲ್ಲಿ ವಿಜ್ಞಾನ ಪ್ರತಿಭೆಗಳಿಗೇನೂ ಕೊರತೆ ಇಲ್ಲ. ಆದರೆ, ಅದನ್ನು ಗುರುತಿಸಿ, ಸೂಕ್ತ ಸ್ಥಾನಮಾನಗಳನ್ನು ಕೊಡುವ ವಾತಾವರಣ ನಮ್ಮಲ್ಲಿಲ್ಲ. ಈ ಕುರಿತು ಲಸಿಕೆ ಮತ್ತು ಔಷಧ ಕಂಪನಿಗಳು ಅವಲೋಕನ ಮಾಡಿಕೊಂಡು, ತಮ್ಮ ಸಂಕುಚಿತ ಧೋರಣೆಯಿಂದ ಹೊರಬರಬೇಕು' ಎಂದರು.
'ಎಲ್ಲದಕ್ಕೂ ಪಾಶ್ಚಾತ್ಯ ಜಗತ್ತಿನ ಕಡೆಗೆ ನೋಡಬಾರದು'
'ನಾವು ಎಲ್ಲದಕ್ಕೂ ಪಾಶ್ಚಾತ್ಯ ಜಗತ್ತಿನ ಕಡೆಗೆ ನೋಡಬಾರದು. ಭಾರತದಲ್ಲೇ ಎಲ್ಲವನ್ನೂ ಸಾಧಿಸಿ ತೋರಿಸಬಹುದು. ಕೊರೊನಾ ಲಸಿಕೆಯ ಯಶೋಗಾಥೆಯು ಇಡೀ ಜಗತ್ತಿಗೆ ನಮ್ಮ ಶಕ್ತಿ-ಸಾಮರ್ಥ್ಯಗಳನ್ನು ತೋರಿಸಿ ಕೊಟ್ಟಿದೆ' ಎಂದು ಯಾಪನ್ ಬಯೋಪ್ರೈವೇಟ್ ಲಿ. ಸಿಇಒ ಅತಿನ್ ತೋಮರ್ ಕಿವಿಮಾತು ಹೇಳಿದರು.
ಇದನ್ನೂ ಓದಿ: ಅಂದು ನೀವು 'ಬಿಟ್' ಅವರನ್ನು ನಾವಿಂದು ಬಂಧಿಸಿದ್ದೇವೆ: ಸಿಎಂ