ಬೆಂಗಳೂರು: ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಕುಟುಂಬಸ್ಥರು ಅಧಿಕಾರ ದುರ್ಬಳಕೆ ಮಾಡಿಕೊಂಡು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವಸತಿ ಯೋಜನೆ ಗುತ್ತಿಗೆ ನೀಡುವ ಸಲುವಾಗಿ ರಾಮಲಿಂಗಂ ಕನಸ್ಟ್ರಕ್ಷನ್ ಕಂಪೆನಿಯಿಂದ ಕೋಟ್ಯಂತರ ರೂಪಾಯಿಗಳನ್ನು ನಗದು ಮತ್ತು ಶೆಲ್ ಕಂಪೆನಿಗಳ ಮೂಲಕ ಲಂಚ ಪಡೆದಿದ್ದಾರೆ ಎಂಬ ಆರೋಪ ಸಂಬಂಧ ತನಿಖೆ ನಡೆಸಲು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಲೋಕಾಯುಕ್ತ ಪೋಲೀಸರಿಗೆ ಆದೇಶಿಸಿದೆ.
ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಅವರು 2021ರ ಜೂನ್‌ನಲ್ಲಿ ದಾಖಲಿಸಿದ್ದ ಖಾಸಗಿ ದೂರಿನ ಸಂಬಂಧ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ತನಿಖೆ ನಡೆಸಿ, ನವೆಂಬರ್ 2ರ ಅಂತ್ಯದ ವೇಳೆಗೆ ಅಂತಿಮ ವರದಿ ಸಲ್ಲಿಸಲು ಸೂಚಿಸಿದ್ದಾರೆ.
ಪ್ರಕರಣದದಲ್ಲಿ ಆರೋಪಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ, ಭಾರತೀಯ ದಂಡ ಸಂಹಿತೆಯಯ ವಿವಿಧ ಸೆಕ್ಷನಗಳ ಅಡಿಯಲ್ಲಿ ತನಿಖೆ ನಡೆಸಬೇಕು ಎಂದು ನ್ಯಾಯಾಧೀಶರು ಸೂಚನೆ ನೀಡಿ ವಿಚಾರಣೆಯನ್ನು ನವೆಂಬರ್ 2ಕ್ಕೆ ಮುಂದೂಡಿದ್ದಾರೆ.
ಪ್ರಕರಣದ ಹಿನ್ನೆಲೆ ಏನು?: ಬಿಡಿಎ ಅಕ್ರಮ ಸಂಬಂಧ ಬಿಎಸ್ ಯಡಿಯೂರಪ್ಪ, ಅವರ ಪುತ್ರ ವಿ.ವೈ. ವಿಜಯೇಂದ್ರ, ಪುತ್ರಿ ಪದ್ಮಾವತಿ ಸಂಬಂಧಿಕರಾದ ಶಶಿಧರ್ ಮರಡಿ ಮತ್ತಿತರರ ವಿರುದ್ಧ ಟಿ.ಜೆ.ಅಬ್ರಾಹಂ ಖಾಸಗಿ ದೂರು ಸಲ್ಲಿಸಿದ್ದರು. ದೂರಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದಿಲ್ಲ ಎಂಬುದಾಗಿ ತಿಳಿಸಿ ಅರ್ಜಿಯನ್ನು ವಜಾಗೊಳಿಸಿತ್ತು.
ಇದನ್ನು ಅಬ್ರಾಹಂ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ್ದ ಹೈಕೋರ್ಟ್ ಯಡಿಯೂರಪ್ಪ ಮತ್ತು ಇತರರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದ ಖಾಸಗಿ ದೂರನ್ನು ಮರುಪರಿಗಣಿಸಲು ಅಧೀನ ನ್ಯಾಯಾಲಯಕ್ಕೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸುವಂತೆ ಆದೇಶಿಸಿದೆ.
ಓದಿ: ಬಿಎಸ್ವೈ ವಿರುದ್ಧದ ಭ್ರಷ್ಟಾಚಾರ ಕೇಸ್.. ವಿಚಾರಣೆ ನಡೆಸುವಂತೆ ವಿಶೇಷ ಕೋರ್ಟ್ಗೆ ಹೈಕೋರ್ಟ್ ನಿರ್ದೇಶನ