ಬೆಂಗಳೂರು : ಮದ್ಯ ತಯಾರಿಕೆಗೆ ಬಳಸಲಾಗುವ ಕಾಕಂಬಿ ರಫ್ತು ಮಾಡುವಲ್ಲಿ ಅಕ್ರಮ ನಡೆಸಿದ ಆರೋಪ ಪ್ರಕರಣ ಸಂಬಂಧ ಮಾಜಿ ಅಬಕಾರಿ ಸಚಿವ ಕೆ. ಗೋಪಾಲಯ್ಯರ ವಿರುದ್ಧ ದಾಖಲಾಗಿದ್ದ ಖಾಸಗಿ ದೂರಿನ ಕುರಿತು ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ತನಿಖಾ ಪ್ರಗತಿ ವರದಿ ನೀಡುವಂತೆ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದೆ.
ಕಾಕಂಬಿ ರಫ್ತಿನಲ್ಲಿ ಅಕ್ರಮ ನಡೆದಿರುವುದಾಗಿ ಆರೋಪಿಸಿ ಮಂಜುನಾಥ ಎಸ್. ಎಂಬುವರು 2023 ರ ಫೆಬ್ರವರಿ 7 ರಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಕೆ.ಎನ್. ರಿಸೋರ್ಸಸ್ ಹೆಸರಿನ ಸಂಸ್ಥೆ ಮೂಲಕ ನಿಯಮ ಬಾಹಿರವಾಗಿ 2 ಲಕ್ಷ ಟನ್ ಕಾಕಂಬಿ ರಫ್ತಿಗೆ ಅವಕಾಶ ನೀಡಿರುವುದಾಗಿ ದೂರಿನ ಲ್ಲಿ ಮಂಜುನಾಥ್ ಎಂಬುವವರು ಆರೋಪಿಸಿದ್ದರು. ಆದರೆ ದೂರು ನೀಡಿದ್ದರೂ ತನಿಖೆ ನಡೆಸದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಲಾಗಿತ್ತು. ಈ ಅರ್ಜಿಗೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಿದ ನ್ಯಾಯಾಲಯ, ಜುಲೈ 25ಕ್ಕೆ ವರದಿ ಸಲ್ಲಿಸುವಂತೆ ಲೋಕಾಯುಕ್ತ ಎಸ್‌ಪಿಗೆ ಸೂಚಿಸಿದೆ.
ಕಾಕಂಬಿ ಉಪ ಉತ್ಪನ್ನವನ್ನು ನೆರೆಯ ರಾಜ್ಯ ಹಾಗೂ ರಾಷ್ಟ್ರಗಳಿಗೆ ರಫ್ತು ಮಾಡಲು ಕಿಕ್ ಬ್ಯಾಕ್ ಪಡೆದುಕೊಳ್ಳಲು ಖಾಸಗಿ ಕಂಪನಿಯೊಂದಕ್ಕೆ ಲಾಭ ಮಾಡಿಕೊಡುವ ಉದ್ದೇಶದಿಂದ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಗೋಪಾಲಯ್ಯ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಮಂಜುನಾಥ ಸಲ್ಲಿಸಿದ ಅರ್ಜಿಯಲ್ಲಿ ಆರೋಪ ಮಾಡಲಾಗಿತ್ತು.
ಕಾಕಂಬಿಯನ್ನು ರಫ್ತು ಮಾಡುತ್ತಿದ್ದ ರಾಜ್ಯದ ಕಂಪನಿಗಳು ಮತ್ತು ರಾಜ್ಯದ ಬಂದರನ್ನು ಕೈಬಿಟ್ಟು ಮುಂಬೈನ ಕೆ.ಎನ್ ರಿಸೋರ್ಸ್ ಪ್ರೈವೈಟ್ ಲಿಮಿಟೆಡ್ ಕಂಪನಿಗೆ ಅನುಮತಿ ನೀಡಲಾಗಿತ್ತು. ಏಕೆ ರಾಜ್ಯದಲ್ಲಿನ ಕಂಪನಿಗಳನ್ನು ಕಡೆಗಣನೆ ಮಾಡಲಾಗಿತ್ತು ಎಂದು ಕೋರ್ಟ್ ಗೆ ಸಲ್ಲಿಸಿದ ಅರ್ಜಯಲ್ಲಿ ಪ್ರಶ್ನಿಸಲಾಗಿತ್ತು. ಅನುಮತಿ ನೀಡುವ ಪ್ರಸ್ತಾವನೆಗೆ ಸಹಿ ಹಾಕುವ ಮೂಲಕ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಗೋಪಾಲಯ್ಯ ಅವರು ಅಬಕಾರಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪ ಮಾಡಲಾಗಿತ್ತು. ಅಷ್ಟೇ ಅಲ್ಲದೇ ಕಾಕಂಬಿ ರಫ್ತು ಗುತ್ತಿಗೆದಾರ ಹಾಗೂ ಖಾಸಗಿ ಕಂಪನಿಗೆ ಸೇರಿದ್ದ ವ್ಯಕ್ತಿ ಮಾತನಾಡಿದ್ದರು ಎನ್ನಲಾಗಿದ್ದ ಆಡಿಯೋವನ್ನು ಈ ಹಿಂದೆ ಕಾಂಗ್ರೆಸ್ ಬಿಡುಗಡೆ ಮಾಡಿತ್ತು. ಈ ಎಲ್ಲ ಅಂಶಗಳನ್ನು ಒಳಗೊಂಡಂತೆ, ಮಾಜಿ ಸಚಿವರ ವಿರುದ್ಧ ಹಾಗೂ ಅವರು ಕೈಗೊಂಡ ನಿರ್ಧಾರದ ವಿರುದ್ಧ ಕೋರ್ಟ್ನಲ್ಲಿ ಪ್ರಶ್ನೆ ಮಾಡಲಾಗಿತ್ತು.
ಇದನ್ನೂ ಓದಿ: ಮಾದಕ ವಸ್ತುಗಳ ಮಾರಾಟ ಪ್ರಕರಣ: ಕೇರಳ ಮೂಲದ ಆರೋಪಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್