ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಗೆ (ಕೆಎಸ್‌ಡಿಎಲ್)ಗೆ ರಾಸಾಯನಿಕ ಪೂರೆಕೆಗೆ ಗುತ್ತಿಗೆ ನೀಡುವ ಕಾರ್ಯಾದೇಶ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣದಲ್ಲಿ ಆರೋಪಿಗಳಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಅವರ ಪುತ್ರ ಬೆಂಗಳೂರು ಜಲ ಮಂಡಳಿಯಲ್ಲಿ ಮುಖ್ಯ ಲೆಕ್ಕಾಧಿಕಾರಿ ಎಂ.ವಿ. ಪ್ರಶಾಂತ್ ಕುಮಾರ್ ಅವರ ವಿರುದ್ಧ ಯಾವುದೇ ರೀತಿಯ ಮಾನಹಾನಿ ಸುದ್ದಿ ಪ್ರಕಟಿಸದಂತೆ ಬೆಂಗಳೂರಿನ ಸಿವಿಲ್ ಮತ್ತು ಸತ್ರ ನ್ಯಾಯಾಲಯವು ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಿದೆ.
ಮಾಡಾಳ್ ವಿರೂಪಾಕ್ಷಪ್ಪ ಮತ್ತು ಪ್ರಶಾಂತ್ ಕುಮಾರ್ ಅವರು ದಾಖಲಿಸಿರುವ ಅಸಲು ದಾವೆಯ ವಿಚಾರಣೆ ನಡೆಸಿದ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಾಲಗೋಪಾಲ ಕೃಷ್ಣ ಅವರು ಈ ಆದೇಶ ಮಾಡಿದ್ದಾರೆ. ಸುದ್ದಿ ಮಾಧ್ಯಮಗಳಲ್ಲೂ ದಾವೆದಾರರ ವಿರುದ್ಧ ಯಾವುದೇ ರೀತಿಯ ಮಾನಹಾನಿ ಅಭಿಪ್ರಾಯ ಪ್ರಸಾರ, ಪ್ರಚಾರ, ಅಭಿವ್ಯಕ್ತಿ ಮಾಡದಂತೆ ಪ್ರತಿವಾದಿ ಮಾಧ್ಯಮಗಳನ್ನು ನಿರ್ಬಂಧಿಸಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿವಾದಿಗಳನ್ನು ಮುಂದಿನ ವಿಚಾರಣೆಯವರೆಗೆ ಯಾವುದೇ ತೆರನಾದ ಚರ್ಚೆ ನಡೆಸದಂತೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಲೋಕಾಯುಕ್ತ ಪೊಲೀಸರು ಆರೋಪಿಯ ಕಚೇರಿ ದಾಳಿ ನಡೆಸಿ ಕಂತೆಗಟ್ಟಲೆ ಗಣ ಜಪ್ತಿ ಮಾಡಿದ್ದರೂ ಫಿರ್ಯಾದಿಗಳು ಭಾರಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬ ತೀರ್ಮಾನಕ್ಕೆ ಬರಲಾಗದು. ಹಣ ಜಪ್ತಿ ಮಾಡಿದ ಕಾರಣಕ್ಕೆ ಫಿರ್ಯಾದಿಗಳು ಕಡು ಭ್ರಷ್ಟರು ಎನ್ನುವ ನಿರ್ಣಯ ಮಾಡಲಾಗದು. ಹೈಕೋರ್ಟ್ ಆದೇಶದ ಪ್ರಕಾರ ತನಿಖೆ ಬಾಕಿ ಇರುವಾಗ ತನಿಖಾ ಸಂಸ್ಥೆಯು ಡೈರಿಯ ವಿಚಾರಗಳನ್ನು ಇತರರಿಗೆ ಸೋರಿಕೆ ಮಾಡುವಂತಿಲ್ಲ. ಮಾಹಿತಿ ಸೋರಿಕೆ ಮಾಡಿದರೆ ತನಿಖೆಯ ಹಳಿ ತಪ್ಪಲಿದೆ. ವಿಸ್ತೃತ ನೆಲೆಯಲ್ಲಿ ಸಾರ್ವಜನಿಕರ ದೃಷ್ಟಿಯಿಂದ ಮಾಧ್ಯಮಗಳು ಪ್ರಸಾರ ಮಾಡುವ ವಿಚಾರಗಳು ಸತ್ಯದಿಂದ ಕೂಡಿರಬೇಕು. ಮೇಲಿಂದ ಮೇಲೆ ಸುದ್ದಿ ಚಾನೆಲ್‌ಗಳು ನಡೆಸುತ್ತಿರುವ ಚರ್ಚೆಗಳು ಫಿರ್ಯಾದಿಗಳ ಚಾರಿತ್ರ್ಯವಧೆಯಲ್ಲದೇ ಮತ್ತೇನು ಅಲ್ಲ. ಸತ್ಯವಿದ್ದರೆ ಮಾಧ್ಯಮಗಳು ಸುದ್ದಿ ಪ್ರಕಟಿಸಬಹುದು. ಅದನ್ನು ಪರಿಶೀಲಿಸಿ ಪ್ರಕಟಿಸಬೇಕಿದೆ. ಮಾಧ್ಯಮಗಳಿಗೆ ದೊರೆತಿರುವ ಸಾಂವಿಧಾನಿಕ ಹಕ್ಕುಗಳನ್ನು ಅವುಗಳು ದುರ್ಬಳಕೆ ಮಾಡುವಂತಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಾಧೀಶರು, ದಾವೆದಾರರು ಸಮಾಜದಲ್ಲಿ ಗಳಿಸಿರುವ ಉತ್ತಮ ಹೆಸರಿಗೆ ಕಳಂಕ ಉಂಟು ಮಾಡಲು ಮಾಧ್ಯಮಗಳು ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಟಿವಿ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡುತ್ತಿವೆ. ಸತ್ಯವನ್ನು ಪರಿಶೀಲಿಸದೇ ಸುದ್ದಿ ಪ್ರಸಾರ ಮಾಡುತ್ತಿರುವ ಮಾಧ್ಯಮಗಳ ಕೆಲಸದಲ್ಲಿ ಪ್ರಾಮಾಣಿಕತೆ ಕಾಣುತ್ತಿಲ್ಲ. ಹೀಗಾಗಿ, ಏಕಪಕ್ಷೀಯ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಲು ಇದು ಸೂಕ್ತ ಪ್ರಕರಣವಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಗೆ ರಾಸಾಯನಿಕ ಪೂರೈಸುವ ಟೆಂಡರ್ ಸಂಬಂಧ 40 ಲಕ್ಷ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಗುರುವಾರ ಶಾಸಕ ವಿರೂಪಾಕ್ಷ ಮಾಡಾಳ್ ಪುತ್ರ ಪ್ರಶಾಂತ್ ಮಾಡಾಳ್ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು.
ಇದನ್ನೂ ಓದಿ: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿವಾಸದಲ್ಲಿ ಲೋಕಾಯುಕ್ತರಿಂದ ಲಕ್ಷಾಂತರ ನಗದು, ಚಿನ್ನಾಭರಣ ಜಪ್ತಿ