ಬೆಂಗಳೂರು : ಡಿಜೆ ಹಳ್ಳಿ ಹಾಗೂ ಕೆಜಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಗಲಭೆ ವೇಳೆ ಶಾಸಕ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಚ್ಚಲು ಕುಮ್ಮಕ್ಕು ನೀಡಿದ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಮಾಜಿ ಮೇಯರ್ ಸಂಪತ್ ರಾಜ್ ಅವರಿಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ.
ಪ್ರಕರಣದಲ್ಲಿ ಜಾಮೀನು ನೀಡುವಂತೆ ಸಂಪತ್ ರಾಜ್ ಸಲ್ಲಿಸಿದ್ದ ಅರ್ಜಿಯನ್ನು ನಗರದ 67ನೇ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ ವಿಚಾರಣೆ ನಡೆಸಿತು. ಕೆಲಕಾಲ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶೆ ಕಾತ್ಯಾಯಿನಿ ಅವರು ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಆದೇಶಿಸಿದರು. ಪ್ರಕರಣ ಸಂಬಂಧ ಇನ್ನೂ ತನಿಖೆ ನಡೆಯುತ್ತಿರುವುದರಿಂದ ಈ ಸಂದರ್ಭದಲ್ಲಿ ಆರೋಪಿಗೆ ಜಾಮೀನು ನೀಡಬಾರದು ಎಂಬ ಪ್ರಾಸಿಕ್ಯೂಷನ್ ಪರ ವಾದ ಪುರಸ್ಕರಿಸಿ ಈ ಆದೇಶ ನೀಡಿದರು.
ಗಲಭೆ ಸಂದರ್ಭದಲ್ಲಿ ತನ್ನ ಆಪ್ತರ ಮೂಲಕ ಕಿಡಿಗೇಡಿಗಳಿಗೆ ಕುಮ್ಮಕ್ಕು ನೀಡಿ ಶಾಸಕ ಅಖಂಡ ಶ್ರೀನಿವಾಸ್ ಅವರ ಮನೆಗೆ ಬೆಂಕಿ ಹಚ್ಚಲು ಪ್ರೇರೇಪಿಸಿದ್ದರು ಎಂದು ಇತರ ಆರೋಪಿಗಳು ತನಿಖಾಧಿಕಾರಿಗಳ ಎದುರು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಂಪತ್ ರಾಜ್ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು.
ವಿಚಾರಣೆ ಹಂತದಲ್ಲಿ ಅನಾರೋಗ್ಯ ನೆಪ ಹೇಳಿ ಆಸ್ಪತ್ರೆ ಸೇರಿದ್ದ ಸಂಪತ್ ರಾಜ್ ಚಿಕಿತ್ಸೆ ಬಳಿಕ ಯಾರಿಗೂ ಹೇಳದೆ ಕೇಳದೆ ತಲೆಮರಿಸಿಕೊಂಡಿದ್ದರು. ಪೊಲೀಸರು ಬಂಧಿಸುವ ಭಯಕ್ಕೆ ಒಳಗಾಗಿದ್ದ ಸಂಪತ್ ರಾಜ್ ತಲೆಮರೆಸಿಕೊಂಡ ವೇಳೆ ನಿರೀಕ್ಷಣಾ ಜಾಮೀನು ಕೋರಿ ಎಸಿಎಂಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತ್ತು.
ಇದನ್ನೂ ಓದಿ: ಜೈಲಿನಲ್ಲಿರುವ ಮಾಜಿ ಮೇಯರ್ಗೆ ಈಗ ಎನ್ಐಎ ಕಂಟಕ
ಇನ್ನು ಗಲಭೆ ಸಂಬಂಧ ದಾಖಲಿಸಿರುವ ಪಿಐಎಲ್ ಗಳ ವಿಚಾರಣೆ ವೇಳೆ ಹೈಕೋರ್ಟ್ ವಿಭಾಗೀಯ ಪೀಠ ಪ್ರಭಾವಿ ಆರೋಪಿಯಾಗಿರುವ ಸಂಪತ್ ರಾಜ್ ಬಂಧಿಸಲು ಎಲ್ಲ ಕ್ರಮಗಳನ್ನು ಜರುಗಿಸುವಂತೆ ಪೊಲೀಸರಿಗೆ ನಿರ್ದೇಶಿಸಿತ್ತು. ಅದರಂತೆ ಸಿಸಿಬಿ ಪೊಲೀಸರು ಸಂಪತ್ ರಾಜ್ ಅವರನ್ನು ನವೆಂಬರ್ 16ರಂದು ಬಂಧಿಸಿದ್ದರು.