ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ನಗರದ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ ವಜಾಗೊಳಿಸಿದೆ.
ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ಆರೋಪಿಗಳಾದ ಸುಧನ್ವ, ಅಮಿತ್ ದಿಗ್ವೇಕರ್, ಸುಜಿತ್, ಮನೋಹರ್ ಹಾಗೂ ರಾಜೇಶ್ ಡಿ. ಬಂಗೇರಾ ಸಲ್ಲಿಸಿದ್ದ ಅರ್ಜಿಯನ್ನು ನಗರದ 1ನೇ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ ನ್ಯಾಯಾಧೀಶರಾದ ಅನಿಲ್ ಬಿ. ಕಟ್ಟಿ ವಿಚಾರಣೆ ನಡೆಸಿದರು. ಕೆಲಕಾಲ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಆರೋಪಿಗಳ ಅರ್ಜಿ ವಜಾಗೊಳಿಸಿ ವಿಚಾರಣೆಯನ್ನು ಫೆ. 22ಕ್ಕೆ ಮುಂದೂಡಿದರು.
2017ರ ಸೆಪ್ಟೆಂಬರ್ 5ರಂದು ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡ, ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಡಿ ಈ ಐವರೂ ಆರೋಪಿಗಳನ್ನು ಬಂಧಿಸಿತ್ತು. ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆರೋಪಿಗಳ ವಿರುದ್ಧ ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಓದಿ: ಸಂಪತ್ ರಾಜ್, ಅಬ್ದುಲ್ ರಕೀಬ್ ಜಾಕಿರ್ಗೆ ಜಾಮೀನು ಪ್ರಶ್ನಿಸಿ ಸುಪ್ರೀಂ ಗೆ ಅರ್ಜಿ