ಬೆಂಗಳೂರು : ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಎನ್ನಲಾಗುವ ಯುವತಿ ಹೇಳಿಕೆ ನೀಡಲು ನ್ಯಾಯಾಲಯದಿಂದ ಅನುಮತಿ ದೊರೆತಿದೆ ಎಂದು ಯುವತಿ ಪರ ವಕೀಲರಾದ ಜಗದೀಶ್ ತಿಳಿಸಿದ್ದಾರೆ.
ಇಂದು ಬೆಳಗ್ಗೆ ವಕೀಲರಾದ ಜಗದೀಶ್ ಅವರು, ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಹೋಗಿ ಡೆಪ್ಯೂಟಿ ರಿಜಿಸ್ಟ್ರಾರ್ ಭೇಟಿ ಮಾಡಿದ್ದರು. ಈ ವೇಳೆ ಯುವತಿ ಹೇಳಿಕೆ ನೀಡಲು ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆ ನ್ಯಾಯಾಲಯದಿಂದ ಯುವತಿ ಹೇಳಿಕೆ ನೀಡಲು ಅನುಮತಿ ದೊರೆತಿದೆ.
ಓದಿ:ಎಸ್‌ಐಟಿ ವಿಚಾರಣೆಗೆ ಹಾಜರಾದ ರಮೇಶ್ ಜಾರಕಿಹೊಳಿ ; ನಿರೀಕ್ಷಣಾ ಜಾಮೀನು ಅರ್ಜಿಗೆ ಚಿಂತನೆ?
ಅರ್ಜಿ ಸಲ್ಲಿಸಿದ ಬಳಿಕ ಮಾತನಾಡಿದ ವಕೀಲ ಜಗದೀಶ್ ಅವರು, ಆದೇಶ ಪ್ರತಿ ನನ್ನ ಕೈ ಸೇರಿದೆ. ಯುವತಿಯನ್ನ ಯಾವಾಗ ಹಾಜರುಪಡಿಸಬೇಕು ಎಂಬುದು ಇನ್ನಷ್ಟೇ ಮಾಹಿತಿ ಸಿಗಬೇಕಿದೆ. ಇಮೇಲ್ ಮೂಲಕ ನನಗೆ ಮಾಹಿತಿ ನೀಡಲಿದ್ದಾರೆ. ಭದ್ರತೆ ವಿಚಾರನೂ ಆದೇಶದ ಪ್ರತಿಯಲ್ಲಿ ಉಲ್ಲೇಖವಾಗಿದೆ. ವಾಟ್ಸ್‌ಆ್ಯಪ್ ಮೂಲಕ ಎಸ್‌ಐಟಿ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ.
ನ್ಯಾಯಾಲಯ ಯಾವಾಗ ಹೇಳಿದರೂ ಹಾಜರುಪಡಿಸಲು ಸಿದ್ಧ. ಯುವತಿಗೆ ಎಲ್ಲಿಂದ ಭದ್ರತೆ ಬೇಕು ಎಂಬುವುದು ಎಸ್ಐಟಿಗೆ ಮಾಹಿತಿ ನೀಡಲಾಗುವುದು. ನ್ಯಾಯಧೀಶರ ಮನೆ ಮುಂದೆ ಹಾಜರುಪಡಿಸಿ ಎಂದರೂ ನಾವು ಸಿದ್ಧ ಎಂದು ಹೇಳಿದ್ದಾರೆ.