ಬೆಂಗಳೂರು: ಅಪ್ರಚೋದನಕಾರಿ ಹೇಳಿಕೆ ಆರೋಪದ ಮೇಲೆ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಈ ಸಂಬಂಧ ಮಂಗಳೂರಿನ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣ ಹಾಗೂ ಎಫ್ಐಆರ್ ರದ್ದು ಕೋರಿ ಹೈಕೋರ್ಟ್‌ಗೆ ಮುತಾಲಿಕ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಇಂದು ಏಕಸದಸ್ಯ ಪೀಠದ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಪೀಠದಲ್ಲಿ ನಡೆಯಿತು.
ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪರ ವಕಾಲತ್ತು ವಹಿಸಿದ್ದ ವಕೀಲ ಅರುಣ್ ಶ್ಯಾಮ್, ರಾಜಕೀಯ ಉದ್ದೇಶದಿಂದ ಈ ಕೇಸ್ ದಾಖಲಿಸಲಾಗಿದೆ. ಪೊಲೀಸರು ಎಫ್ಐಆರ್ ದಾಖಲಿಸುವ ಮುನ್ನ ನ್ಯಾಯಾಲಯದ ಅನುಮತಿ ಪಡೆದಿಲ್ಲ ಎಂದರು. ಈ ವೇಳೆ ವಾದ ಆಲಿಸಿದ ನ್ಯಾಯಾಲಯ ಪ್ರಕರಣ ರದ್ದು ಮಾಡಿದೆ.
ಏನಿದು ಪ್ರಕರಣ:
2014 ರ ನ.16 ರಂದು ನಡೆಸ ಸುದ್ದಿಗೋಷ್ಠಿಯಲ್ಲಿ ಮುತಾಲಿಕ್, ಅಪ್ರಚೋದನಕಾರಿ ಹೇಳಿಕೆ ನೀಡಿರುವ ಆರೋಪ ಎದುರಿಸಿದ್ದರು. ಹೇಳಿಕೆಯ ಹಿಂದೆ ಹಿಂಸೆಗೆ ದಾರಿ ಮಾಡಿಕೊಡುವ ಮತ್ತು ಶಾಂತಿ ಕದಡುವ ಉದ್ದೇಶ ಇರುವುದರಿಂದ ಮಂಗಳೂರು ಪೂರ್ವ ವಿಭಾಗ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 505(1)ಬಿ ಅಡಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ಮುತಾಲಿಕ್ ಮಂಗಳೂರಿನ ಕೋರ್ಟ್‌ನಲ್ಲಿ 2014ರ ಡಿ. 20ರಂದು ಜಾಮೀನು ಪಡೆದಿದ್ದರು. ನಂತರ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ರು ಮುತಾಲಿಕ್.