ಬೆಂಗಳೂರು: ಕಾಂಗ್ರೆಸ್ ಪಕ್ಷ ಯಾವ ಆಧಾರದಲ್ಲಿ ಅಧಿಕಾರಕ್ಕೆ ಬಂತು. ಅಧಿಕಾರ ಕಳೆದುಕೊಂಡಿತು. ಬಿಜೆಪಿ ಹೇಗೆ ಅಧಿಕಾರಕ್ಕೆ ಬಂದಿದೆ ಎಂದು ಜೆಡಿಎಸ್ ಸದಸ್ಯರು ಸದನದಲ್ಲಿ ಮಾತನಾಡಿದ ಪ್ರಸಂಗ ವಿಧಾನಪರಿಷತ್ನಲ್ಲಿ ನಡೆಯಿತು.
ವಿಧಾನ ಪರಿಷತ್ನ ಬೆಳಗಿನ ಕಲಾಪದಲ್ಲಿ ಸಂವಿಧಾನ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ, ಶಾಸಕಾಂಗ ಕಾರ್ಯದ ಕೆಲಸ ಶಾಸನಗಳನ್ನು ರಚಿಸೋದಾದರೆ ಸದನದಲ್ಲಿ ಚರ್ಚೆಯಾಗದೇ ಬಿಲ್ಗಳು ಪಾಸಾಗುತ್ತದೆ. ಇನ್ನು ಕಾರ್ಯಾಂಗ ಕೂಡ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಲಂಚ ಇಲ್ಲದೆ ಅಧಿಕಾರಿಗಳು ಜನರ ಕೆಲಸ ಮಾಡುವುದಿಲ್ಲ. ಸಂವಿಧಾನದ ಆಶಯ ಇದೇನಾ ಎಂದು ಪ್ರಶ್ನಿಸಿದರು.
ನಂತರ ವಿಷಯಾಂತರವಾಗಿ ಕಾಂಗ್ರೆಸ್ ಪಕ್ಷ ಕಾರ್ಯಕ್ರಮಗಳ ಮೂಲಕ ಅಧಿಕಾರಕ್ಕೆ ಬಂದಿದೆ. ಆದರೆ ಧರ್ಮಗಳ ಹೆಸರಿನಲ್ಲಿ ಬಿಜೆಪಿ ಆಡಳಿತಕ್ಕೆ ಬಂದಿವೆ. ರಾಮನ ದೇವಸ್ಥಾನದ ಮೂಲಕ ಅಧಿಕಾರ ಹಿಡಿದಿದೆ ಎಂದರು.
ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ, ಸದನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಯಾವ ಮಾನದಂಡದಿಂದ ಇದನ್ನು ಹೇಳಿದ್ದಾರೆ. ಚುನಾವಣೆಯಲ್ಲಿ ಗೆದ್ದು ಬಂದ ಪಕ್ಷದ ಬಗ್ಗೆ ಹೀಗೆ ಹೇಳಬಹುದಾ? ನಾವು ರಾಷ್ಟ್ರ ಧರ್ಮ, ರಾಜ್ಯ ಧರ್ಮದ ಆಧಾರದ ಮೇಲೆ ಅಧಿಕಾರಕ್ಕೆ ಬಂದಿದ್ದೇವೆ ಎಂದರು.
ನಂತರ ಮಾತು ಮುಂದುವರೆಸಿದ ಮರಿ ತಿಬ್ಬೇಗೌಡ, ನಂಬಿಕೆ ಸಮಾಜದ ಒಳಿತಿಗೆ ಬಳಕೆ ಮಾಡಬೇಕು. ಧರ್ಮ ಒಂದು ರೀತಿಯಲ್ಲಿ ಅಫೀಮಿದ್ದಂತೆ. ಈಗ ಎಲ್ಲೆಡೆ ಕೊರೊನಾ ವೈರಸ್ ಹಾವಳಿ ತಲೆದೂರಿದೆ. ದೇಶದ ಎಲ್ಲಾ ದೇವಾಲಯಗಳಲ್ಲಿ ಜಪ-ತಪ, ಪೂಜೆ ಮಾಡಲಿ. ಕೊರೊನಾ ಹೋಗುತ್ತಾ? ಜನರನ್ನು ಮೌಢ್ಯದಲ್ಲಿ ಇಟ್ಟಿದ್ದೇವೆ ಎಂದರು.
ಇಂದು ನಾವೆಲ್ಲಾ ನಮ್ಮ ತಲೆಮಾರು ಕುಳಿತು ತಿಂದರೂ ಖಾಲಿಯಾಗದಷ್ಟು ಸಂಪಾದನೆ ಮಾಡುತ್ತಿದ್ದೇವೆ. ಇಷ್ಟೆಲ್ಲಾ ಯಾಕೆ ಬೇಕು. ಪ್ರಕೃತಿ ಮುನಿದರೆ ಏನು ಇಲ್ಲ ಎಂದು ಕುವೆಂಪು ಅಂದೇ ಹೇಳಿದ್ದರು. ಬಿಜೆಪಿಗೆ ಪಂಚಾಂಗ, ಜ್ಯೋತಿಷ್ಯ ಬಳಸುವುದು ಬಿಟ್ಟರೆ ಬೇರೆ ಕೆಲಸ ಇಲ್ಲ ಎಂದು ಟೀಕಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯತೆ ತೇಜಸ್ವಿನಿಗೌಡ, ಪಂಚಾಂಗದಂತೆ ನಡೆದುಕೊಳ್ಳುವ ದೇವೇಗೌಡರನ್ನು ವಿರೋಧಸುತ್ತೀರಾ? ಕುಮಾರಸ್ವಾಮಿ ಸಿಎಂ ಆಗುವಾಗ ಸಮಯ ನೋಡಿರಲಿಲ್ಲವೇ ಎಂದು ಟಾಂಗ್ ನೀಡಿ ನೀಡಿದರು. ನಂತರ ಸಂವಿಧಾನ ತಿದ್ದುಪಡಿ ಸಂದರ್ಭದಲ್ಲಿ ಜನಹಿತ, ಜನಪರ, ಬಡವರ ಪರ ತಿದ್ದುಪಡಿ ಮಾಡುವ ದಿಟ್ಟ ಚಿಂತನೆ ಮಾಡಬೇಕು. ತಿದ್ದುಪಡಿಗೆ ನಮ್ಮದೇನು ವಿರೋಧವಿಲ್ಲ. ಆದರೆ ಜನಸಾಮಾನ್ಯರ ಆಶೋತ್ತರಗಳಿಗೆ ಪೂರಕವಾಗಿಯೇ ತಿದ್ದುಪಡಿ ಮಾಡಿ. ಬಾಬಾ ಸಾಹೇಬ್ ಅಂಬೇಡ್ಕರ್ ಆಶೋತ್ತರಗಳನ್ನು ಈಡೇರಿಸಬೇಕು ಎಂದು ಮನವಿ ಮಾಡಿದರು.