ಬೆಂಗಳೂರು: ಚುನಾವಣೆ ನಡೆದ ವರ್ಷವಾದರೂ ರಾಜ್ಯದ 55 ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ನಿಗದಿಪಡಿಸಲು ಕಾನೂನು ತೊಡಕು ಅಡ್ಡಿಯಾಗಿದೆ. ಆದಷ್ಟು ಬೇಗ ಕ್ರಮ ವಹಿಸಲಾಗುತ್ತದೆ ಎನ್ನುವ ಸರ್ಕಾರದ ಉತ್ತರಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಕಿಡಿಕಾರಿದ್ದು, ಸಭಾತ್ಯಾಗ ನಡೆಸಿತು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಎಸ್ ರವಿ ಪ್ರಶ್ನೆಗೆ ಸಚಿವ ಎಂಟಿಬಿ ನಾಗರಾಜ್ ಉತ್ತರ ನೀಡಿದ್ದು, ಸಚಿವರ ಉತ್ತರಕ್ಕೆ ಸದಸ್ಯ ರವಿ ಅಸಮಾಧಾನ ವ್ಯಕ್ತಪಡಿಸಿದರು.
"ರಾಜ್ಯದ 55 ನಗರ ಸ್ಥಳೀಯ ಸಂಸ್ಥೆಗಳಿಗೆ 2018ರಲ್ಲಿ ಅವಧಿ ಮುಗಿದಿದೆ. ಆದರೆ 2021ಕ್ಕೆ ಚುನಾವಣೆ ಮಾಡಿದ್ದಾರೆ. ಒಂದು ವರ್ಷ ಆದರೂ ಅಧ್ಯಕ್ಷ ಉಪಾಧ್ಯಕ್ಷರ ನೇಮಕ ಮಾಡಿಲ್ಲ. ಇನ್ನೂ 15 ದಿನ ಬಾಕಿ ಇದೆ, ನೀತಿ ಸಂಹಿತೆ ಬರಲಿದೆ. ಇವರ ಉತ್ತರವನ್ನು ಉಪ್ಪಿನಕಾಯಿ ಹಾಕಿ ನೆಕ್ಕಬೇಕಾ? ಕೋರ್ಟ್ನಲ್ಲಿ ನೂರು ಕೇಸ್ಗಳಿವೆ. ನೀವೇನು ಮಾಡುತ್ತಿದ್ದೀರಾ?" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಮತ್ತೆ ಉತ್ತರಿಸಿದ ಸಚಿವ ಎಂಟಿಬಿ ನಾಗರಾಜ್, "ನಿನ್ನೆ ಸಚಿವ ಸಂಪುಟದಲ್ಲಿಯೂ ಚರ್ಚೆ ನಡೆಸಲಾಗಿದೆ. ಆದಷ್ಟು ಬೇಗ ನ್ಯಾಯಾಲಯದ ಕೇಸ್ ಇತ್ಯರ್ಥಪಡಿಸಿ ಅಧ್ಯಕ್ಷ ಉಪಾಧ್ಯಕ್ಷರ ನೇಮಕಾತಿಗೆ ಕ್ರಮ ವಹಿಸಲಾಗುತ್ತದೆ" ಎಂದರು. ಈ ವೇಳೆ, ಉತ್ತರ ನೀಡಲು ಬಿಡದೇ ಪ್ರತಿಪಕ್ಷ ನಾಯಕರು ರೊಚ್ಚಿಗೆದ್ದರು. ಆಗ ಎಂಟಿಬಿ ಬೆಂಬಲಕ್ಕೆ ಎಸ್ಟಿ ಸೋಮಶೇಖರ್ ನಿಂತು, "ಸಚಿವರು ಸಮರ್ಥರಿದ್ದಾರೆ. ಅವರು ಮಾತನಾಡಲಿದ್ದಾರೆ ಬಿಡಿ" ಎಂದು ಜೋರು ದನಿಯಲ್ಲಿ ಹೇಳಿದರು.
ಇದನ್ನೂ ಓದಿ: ಬಿಜೆಪಿ ಸರ್ಕಾರದ ಅಕ್ರಮದ ಕುರಿತು ಚು.ಆಯೋಗಕ್ಕೆ ದೂರು: ಪ್ರಿಯಾಂಕ್ ಖರ್ಗೆ
ಈ ವೇಳೆ ಮಧ್ಯಪ್ರವೇಶ ಮಾಡಿದ ಸಭಾಪತಿ ಬಸವರಾಜ ಹೊರಟ್ಟಿ, "ಎಲ್ಲ ಸಚಿವರಿಗೂ ಉತ್ತರಿಸಲು ಹಕ್ಕಿದೆ. ಸಚಿವರ ನೆರವಿಗೆ ಮತ್ತೊಬ್ಬರು ದಾವಿಸುವುದು ಸಹಜ" ಎಂದರು. ಬಳಿಕ ಮಾತು ಮುಂದುವರೆಸಿದ ಎಂಟಿಬಿ, "ಎಲ್ಲ ಅನುದಾನ ಕೊಡಲಾಗಿದೆ. ಕೆಲ ಅನುದಾನ ಬಾಕಿ ಇದ್ದು, ಅದನ್ನೂ ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ. ಅನುದಾನವನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗಿದೆ" ಎಂದರು.
ಸದಸ್ಯ ರವಿ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸರ್ಕಾರವನ್ನು ಸಮರ್ಥಿಸಿಕೊಂಡು ಮಾತನಾಡಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, "ಭಕ್ತ ವತ್ಸಲ ಸಮಿತಿ ವರದಿಗೆ ಹೈಕೋರ್ಟ್ ತಡೆ ನೀಡಿದೆ. ಮತ್ತೊಂದು ವರದಿ ಕೇಳಿದ್ದೇವೆ, ಜನಪ್ರತಿನಿಧಿ ಕೈಗೆ ಅಧಿಕಾರ ಇಲ್ಲದಿದ್ದಾಗ ಅಭಿವೃದ್ಧಿ ಕುಂಠಿತ ಒಪ್ಪುತ್ತೇವೆ. ಆದಷ್ಟು ಬೇಗ ಇದರ ಇತ್ಯರ್ಥ ಮಾಡಲಿದ್ದೇವೆ" ಎಂದರು.
ಸರ್ಕಾರದ ಉತ್ತರಕ್ಕೆ ಕಿಡಿಕಾರಿದ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್, "6 ತಿಂಗಳಿಗೂ ಹೆಚ್ಚು ಕಾಲ ಸ್ಥಳೀಯ ಸಂಸ್ಥೆ ಖಾಲಿ ಇಡುವಂತಿಲ್ಲ. ಇದು ಸಂವಿಧಾನದ ಉಲ್ಲಂಘನೆಯಲ್ಲವೇ? ಇತರ ರಾಜ್ಯದಲ್ಲಿ ಆದ ಚುನಾವಣೆ ಇಲ್ಲೇಕೆ ಆಗಿಲ್ಲ?" ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, "ಮಹಾರಾಷ್ಟ್ರ ಚುನಾವಣೆಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿತು. ಹಾಗಾಗಿ ಭಕ್ತ ವತ್ಸಲ ಸಮಿತಿ ರಚಿಸಲಾಗಿದೆ. ಹುದ್ದೆ ಖಾಲಿ ಬಿಡಬಾರದು ಎನ್ನುವುದು ಸತ್ಯ. ಆದರೆ, ಕೋರ್ಟ್ ಹೇಳಿದಾಗ ಏನು ಮಾಡಲು ಸಾಧ್ಯ? ವರದಿ ತರಿಸಿಕೊಂಡು ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಭರವಸೆ ನೀಡಿದರು.
ಸರ್ಕಾರದ ಉತ್ತರ ಖಂಡಿಸಿದ ಸದಸ್ಯ ಎಸ್.ರವಿ ಸಭಾತ್ಯಾಗ ಮಾಡಿದರು. ಇದಕ್ಕೆ ದನಿಗೂಡಿಸಿದ ಕಾಂಗ್ರೆಸ್ ವಿಪ್ ಪ್ರಕಾಶ್ ರಾಥೋಡ್ ಸಭಾತ್ಯಾಗದ ಘೋಷಣೆ ಮಾಡಿದರು. ಸರ್ಕಾರಕ್ಕೆ ಧಿಕ್ಕಾರ ಕೂಗಿ ಸಭಾತ್ಯಾಗ ಮಾಡಿದರು. ಈ ವೇಳೆ, ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಚುನಾವಣೆ 2023: '5ಬಿ' ಕಾರ್ಯತಂತ್ರ ರೂಪಿಸಿದ ಬಿಜೆಪಿ