ಬೆಂಗಳೂರು: ಷರತ್ತು ಉಲ್ಲಂಘನೆ ಮಾಡಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ಕ್ಕೆ ಹತ್ತಾರು ಕೋಟಿ ನಷ್ಟ ಉಂಟು ಮಾಡಿರುವ ಕಾಸ್ಮೋಪಾಲಿಟಿನ್ ಕ್ಲಬ್ ಅನ್ನು ಈ ಕೂಡಲೇ ವಶಕ್ಕೆ ಪಡೆಯುವಂತೆ ಆಗ್ರಹಿಸಿ ಬಿಡಿಎ ಆಯುಕ್ತರಿಗೆ ಬೆಂಗಳೂರು ನಾಗರಿಕರ ಹಕ್ಕು ಹೋರಾಟ ಸಮಿತಿ ಸೋಮವಾರ ಪತ್ರ ಬರೆದು ದೂರು ನೀಡಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕ್ಲಬ್‌ನ ನಿರ್ಮಾಣ ನಿರ್ವಹಣೆಗೆಂದು ಗುತ್ತಿಗೆಗೆ ನೀಡಲಾಗಿರುವ ಈ ಸ್ವತ್ತಿನ ಗುತ್ತಿಗೆ ಕರಾರು ಪತ್ರದಲ್ಲಿ, ಸುತ್ತಮುತ್ತಲಿನ ನಾಗರಿಕರಿಗೆ ಅಗತ್ಯವಿರುವ ವಿವಿಧ ರೀತಿಯ ಸಹಾಯಾರ್ಥ ಕಾರ್ಯಗಳು ಮತ್ತು ಸಾಮಾಜಿಕ ಸೇವಾ ಕಾರ್ಯಗಳನ್ನು ಕ್ಲಬ್‌ನ ಆದಾಯದ ಮೂಲಗಳಿಂದ ಮಾಡಬೇಕು ಎಂಬ ಷರತ್ತು ವಿಧಿಸಲಾಗಿದೆ. ಈ ಷರತ್ತುಗಳನ್ನು ಆಡಳಿತ ಮಂಡಳಿ ಉಲ್ಲಂಘಿಸಿದೆ. ಹಾಗಾಗಿ ಕ್ಲಬ್ ಅನ್ನು ವಶಕ್ಕೆ ಪಡೆದುಕೊಳ್ಳಬೇಕು ಎಂದು ಸಮಿತಿ ಉಪಾಧ್ಯಕ್ಷ ಗಣೇಶ್ ಸಿಂಗ್ ಒತ್ತಾಯಿಸಿದ್ದಾರೆ.
ನಗರದ ಅತ್ಯಂತ ಪ್ರತಿಷ್ಠಿತ ಕ್ಲಬ್‌ನಗಳ ಪೈಕಿ ಒಂದಾಗಿರುವ ಈ ಕ್ಲಬ್ ತನ್ನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುತ್ತಿರುವ ನಾಗರಿಕರು ಮತ್ತು ಕ್ಲಬ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆಂದು ಹಲವು ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುವ ಉದ್ದೇಶದಿಂದ 2009 ರಲ್ಲಿ ಅಂಗಸಂಸ್ಥೆ ಪ್ರಾರಂಭಿಸಿತ್ತು. ಆದಾಯ ತೆರಿಗೆ ಕಾಯ್ದೆಯ ನಿಯಮ 80ಜಿ ಅಡಿ ನೋಂದಾಯಿಸಲ್ಪಟ್ಟಿರುವ ಈ ಅಂಗ ಸಂಸ್ಥೆಗೆ ಹಲವಾರು ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡಲು ಹಲವು ದಾನಿಗಳು ಲಕ್ಷಾಂತರ ರೂಪಾಯಿ ದೇಣಿಗೆ ನೀಡಿದ್ದಾರೆ. ಈ ಕ್ಲಬ್ ತನ್ನ ಸದಸ್ಯರ ಮುಖೇನ ಕೋಟ್ಯಂತರ ರೂಪಾಯಿ ಆದಾಯ ವೃದ್ಧಿಸಿಕೊಂಡಿರುವುದರ ಜತೆಗೆ ಕಟ್ಟಡದಲ್ಲಿ ನಿರ್ಮಿಸಲಾಗಿರುವ ಹಲವು ವಾಣಿಜ್ಯ ಕೇಂದ್ರಗಳಿಂದ ಪ್ರತೀ ತಿಂಗಳು ಸುಮಾರು 15 ಲಕ್ಷ ರೂ.ಗಳಷ್ಟು ಹಣ ಬಾಡಿಗೆ ರೂಪದಲ್ಲಿ ಪಡೆದುಕೊಳ್ಳುತ್ತಿದೆ. ಹೀಗಿದ್ದರೂ ಇತ್ತೀಚೆಗೆ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮಧ್ಯಾಹ್ನದ ಊಟ ಸ್ಥಗಿತಗೊಳಿಸುವ ನಿರ್ಣಯವನ್ನು ಕೈಗೊಳ್ಳಲಾಗಿದೆ. ಇದು ಕರಾರು ಪತ್ರದಲ್ಲಿನ ಷರತ್ತುಗಳ ಉಲ್ಲಂಘನೆ ಎಂದು ದೂರು ಪ್ರತಿಯಲ್ಲಿ ಅವರು ಉಲ್ಲೇಖ ಮಾಡಿದ್ದಾರೆ.
ಕಾಸ್ಮೋಪಾಲಿಟಿನ್ ಕ್ಲಬ್ ಪ್ರತಿ ತಿಂಗಳು ಸಂಗ್ರಹಿಸುತ್ತಿರುವ ಬಾಡಿಗೆ ಹಣದಲ್ಲಿ ಮೂರನೇ ಎರಡು ಭಾಗದಷ್ಟು ಹಣವನ್ನು ಬಿಡಿಎ ಪಾವತಿಸಬೇಕು. ಇದರ ಜತೆಗೆ 30 ವರ್ಷಗಳ ಗುತ್ತಿಗೆ ಅವಧಿಯಲ್ಲಿ ಪ್ರತಿ ತಿಂಗಳು ನೀಡುತ್ತಿರುವ 27 ಸಾವಿರ ರೂ. ಗಳ ಗುತ್ತಿಗೆ ಹಣದ ಬದಲಿಗೆ ತಿಂಗಳಿಗೆ ಕನಿಷ್ಠ 5 ಲಕ್ಷ ರೂ. ಗಳಂತೆ ವಾರ್ಷಿಕ 60 ಲಕ್ಷ ರೂ. ಬಾಡಿಗೆ ಪಡೆದುಕೊಳ್ಳಲು ಬಿಡಿಎ ಆಯುಕ್ತರು ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.
ಗುತ್ತಿಗೆ ಕರಾರು ಪತ್ರವನ್ನು ಕೂಡಲೇ ರದ್ದು ಪಡಿಸಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಶಕ್ಕೆ ಪಡೆದು ಈ ಕ್ಲಬ್ ಅನ್ನು ಪ್ರಾಧಿಕಾರದ ವತಿಯಿಂದಲೇ ನಿರ್ವಹಿಸಲು ಕ್ರಮ ವಹಿಸುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಕೆಪಿಸಿಸಿಯಿಂದ ಅಳವಡಿಸಿದ್ದ ಅನಧಿಕೃತ ಬ್ಯಾನರ್ ತೆರವು, ₹50 ಸಾವಿರ ದಂಡ