ದೇವನಹಳ್ಳಿ : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉತ್ತಮ ಒಳ ಚರಂಡಿ ವ್ಯವಸ್ಥೆ ಇದೆ. ನಿನ್ನೆ ಸಂಜೆ ಸುರಿದ ಭಾರಿ ಮಳೆಯಿಂದ ನೀರು ನಿಲ್ಲುವಂತಾಗಿದೆ ಎಂದು ಕೆಐಎಎಲ್ ನಿನ್ನೆಯ ಘಟನೆಯ ಬಗ್ಗೆ ಕಾರ್ಪೊರೇಟ್ ಅಫೇರ್ಸ್ ಮುಖ್ಯಸ್ಥ ಸಿ. ಶ್ರೀನಿವಾಸ್ ಪ್ರತಿಕ್ರಿಯಿಸಿದ್ದಾರೆ.
ನಿನ್ನೆ ಸಂಜೆ ಸುರಿದ ಭಾರಿ ಮಳೆಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಹಾಗೂ ತಿರುವಿನ ಬದಿಯಲ್ಲಿ ಹೆಚ್ಚುವರಿ ನೀರು ನಿಲ್ಲುವಂತಾಗಿದೆ. 2008ರಿಂದ ಕೆಐಎಎಲ್ ಕಾರ್ಯಾಚರಣೆ ನಡೆಯುತ್ತಿದೆ. 13 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಏರ್ಪೋರ್ಟ್ನಲ್ಲಿ ಭಾರಿ ಮಳೆಯಾಗಿದೆ ಎಂದರು.
ಒಮ್ಮೆಲೇ ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಏರ್ಪೋರ್ಟ್ನಲ್ಲಿ ನೀರು ನಿಲ್ಲುವಂತಾಗಿದೆ. ಅಲ್ಲಿ ಒಳಚರಂಡಿ ವ್ಯವಸ್ಥೆಯೂ ಉತ್ತಮವಾಗಿದೆ. ಆದರೆ, ತಿರುವಿನಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ಕೆಲವು ಕಾಲ ಮಳೆ ನೀರು ನಿಲ್ಲುವಂತಾಗಿದೆ. ಇದರಿಂದ ಪ್ರಯಾಣಿಕರು ಪರದಾಡಬೇಕಾದ ಪರಿಸ್ಥಿತಿ ಉಂಟಾಯಿತು.
ತಕ್ಷಣವೇ ಎಚ್ಚೆತ್ತ ಏರ್ಪೋರ್ಟ್ ಸಿಬ್ಬಂದಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಕಾರ್ಯಾಚರಣೆ ನಡೆಸಿದ್ದಾರೆ. ಹವಾಮಾನ ವೈಪರೀತ್ಯ ಹಾಗೂ ಮಂದ ಬೆಳಕಿನ ಕಾರಣಕ್ಕೆ ಸಂಜೆ 5.30 ರಿಂದ 11.59 ಗಂಟೆಗಳ ನಡುವೆ 20 ನಿರ್ಗಮನ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ. ತದ ನಂತರ ವಿಮಾನಗಳ ಹಾರಾಟ ಎಂದಿನಂತೆ ಕಾರ್ಯಾಚರಣೆ ನಡೆಸಿವೆ ಎಂದು ತಿಳಿಸಿದರು.
ಓದಿ: ಮಕ್ಕಳೊಂದಿಗೆ ಶಿಕ್ಷಕಿ ಜಾತಿ ತಾರತಮ್ಯ ಮಾಡಿದ ಆರೋಪ.. ಬಿಇಒ ಕಾಲಿಗೆ ಬಿದ್ದ ಪೋಷಕರು..