ಬೆಂಗಳೂರು: ಮಹಾಮಾರಿ ಕೊರೊನಾ ಕಳೆದೊಂದು ತಿಂಗಳಿಂದ ವ್ಯಾಪಕವಾಗಿ ಹರಡುತ್ತಿದ್ದು, ಇದರ ಭಯದಲ್ಲಿ ಮಕ್ಕಳಿಗೆ ಆಸ್ತಿ ವರ್ಗಾಯಿಸುವ ಹಾಗೂ ಉಡುಗೊರೆಯಾಗಿ ನೀಡುವ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ.
ರಾಜ್ಯದಾದ್ಯಂತ ಕೊರೊನಾ ಸೋಂಕು ವೇಗವಾಗಿ ಹಬ್ಬುತ್ತಿದೆ. ಇದರಿಂದ ಆತಂಕಕ್ಕೊಳಗಾರುವ ಹಿರಿಯ ನಾಗರಿಕರು ಅದರಲ್ಲೂ ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಾಗರಿಕರು ಸಬ್ ರಿಜಿಸ್ಟ್ರಾರ್ ಕಚೇರಿಗಳ ಕಡೆ ಹೆಜ್ಜೆ ಹಾಕುತ್ತಿದ್ದಾರೆ. ತಾವು ಗಟ್ಟಿಯಾಗಿದ್ದಾಗಲೇ ಮಕ್ಕಳಿಗೆ ಉಡುಗೊರೆಯಾಗಿ ನೀಡಬೇಕೆಂದುಕೊಂಡು ಆಸ್ತಿ ಅವರ ಹೆಸರಿಗೆ ರಿಜಿಸ್ಟರ್ ಮಾಡಿಸುತ್ತಿದ್ದಾರೆ.
ಈ ಕುರಿತು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಹಿರಿಯ ಐಎಎಸ್ ಅಧಿಕಾರಿ ಹಾಗೂ ಇನ್ಸ್ಪೆಕ್ಟರ್ ಜನರಲ್ ಆಫ್ ರಿಜಿಸ್ಟರ್ ಮೋಹನ್ ರಾಜ್ ಹೇಳುವಂತೆ, ಜನ ಕೋವಿಡ್-19 ಬಳಿಕ ಆತಂಕದಲ್ಲಿರುವುದು ನಿಜ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಆಸ್ತಿ ವರ್ಗಾವಣೆ ಮಾಡಲು ಮುಂದಾಗಿದ್ದಾರೆ ಎನ್ನುವುದಕ್ಕೆ ಯಾವುದೇ ಮಾನದಂಡಗಳಿಲ್ಲ. ಆದರೆ ಗಿಫ್ಟ್ ಡೀಡ್ ರಿಜಿಸ್ಟ್ರೇಷನ್ಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ ಎನ್ನುತ್ತಾರೆ.ಇದಕ್ಕೆ ಪೂರಕವೆಂಬಂತೆ ಲಾಕ್ಡೌನ್ ನಿಯಮಗಳನ್ನು ಸಡಿಲಿಸಿದ ಬಳಿಕ ರಾಜ್ಯದ ಸಬ್ರಿಜಿಸ್ಟ್ರಾರ್ ಕಚೇರಿಗಳಲ್ಲಿನ ಗಿಫ್ಟ್ ಡೀಡ್ ನೋಂದಣಿ ಏರುಮುಖವಾಗಿದೆ.
ಕಳೆದ ಏಪ್ರಿಲ್ 24ರಿಂದ ಜುಲೈ 5 ರವರೆಗೆ ರಾಜ್ಯದಲ್ಲಿ 2.9 ಲಕ್ಷ ಆಸ್ತಿಗಳು ನೋಂದಣಿಯಾಗಿದ್ದು, ಇವುಗಳಲ್ಲಿ ಗಿಫ್ಟ್ ಡೀಡ್ಗಳ ಸಂಖ್ಯೆ ಅಂದಾಜು 15 ಸಾವಿರಕ್ಕೂ ಹೆಚ್ಚಿದೆ. ಯಲಹಂಕದ ಸಬ್ ರಿಜಿಸ್ಟ್ರಾರ್ ಕಚೇರಿಯ ನೌಕರ ರವೀಂದ್ರಪ್ಪ ಹೇಳುವಂತೆ, ಕಳೆದ ಎರಡು ತಿಂಗಳಿಂದ ವಾರಕ್ಕೆ 35 ರಿಂದ 40 ಗಿಫ್ಟ್ ಡೀಡ್ ಪತ್ರಗಳು ನೋಂದಣಿಯಾಗುತ್ತಿವೆ. ಹಿರಿಯ ನಾಗರಿಕರು ತಾವು ಗಳಿಸಿದ ಆಸ್ತಿಯಲ್ಲಿ ಮಕ್ಕಳಿಗೆ ಇಂತಿಷ್ಟು ಎಂಬಂತೆ ಹಂಚಿಕೆ ಮಾಡುವ ಲೆಕ್ಕಾಚಾರ ಹಾಕಿಕೊಂಡಿರುತ್ತಾರೆ. ಈ ಬಗ್ಗೆ ಮಕ್ಕಳೊಂದಿಗೆ ಪ್ರಸ್ತಾಪಿಸಿದ್ದರೂ ಮುಂದೆ ಸೂಕ್ತ ಕಾಲ ನೋಡಿಕೊಂಡು ಕೊಡೋಣ ಎಂದುಕೊಂಡಿರುತ್ತಾರೆ. ಇತ್ತೀಚೆಗೆ ಕೊರೊನಾ ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ಆತಂಕಕ್ಕೆ ಒಳಗಾಗಿರುವ ಕುಟುಂಬದ ಹಿರಿಯರು ಈಗಲೇ ಗಿಫ್ಟ್ ಡೀಡ್ ಮೂಲಕ ತಮ್ಮ ಕರ್ತವ್ಯ ಪೂರೈಸುತ್ತಿದ್ದಾರೆ ಎಂದಿದ್ದಾರೆ.