ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ದಿನೇದಿನೆ ತನ್ನ ಭೀಕರತೆ ಪ್ರದರ್ಶಿಸುತ್ತಿದೆ. ಎರಡನೇ ಅಲೆಗೆ ನಿಯಂತ್ರಣಕ್ಕೆ ಮತ್ತೆ ರಾಜ್ಯ ಲಾಕ್‌ಡೌನ್ ಮೊರೆ ಹೋಗಲಾಗಿದೆ.
ಆದರೆ, ಲಾಕ್‌ಡೌನ್‌ನಿಂದ ರಾಜ್ಯದ ಹಣಕಾಸು ಸ್ಥಿತಿಗತಿ ಪಾತಾಳಕ್ಕೆ ಕುಸಿಯಲಿದೆ. 2021-22ನೇ ಸಾಲಿನ ಬಜೆಟ್ ಲೆಕ್ಕಾಚಾರವೇ ಬುಡಮೇಲಾಗಲಿದೆ. ಈ ಹಿನ್ನೆಲೆ ಕಳೆದ ವರ್ಷದಂತೆ ಈ ಬಾರಿಯೂ ಹಲವು ಇಲಾಖೆಗಳ ಬಜೆಟ್ ಅನುದಾನದಲ್ಲಿ ಗಣನೀಯ ಕಡಿತವಾಗಲಿದೆ.
ಒಂದೆಡೆ ಮೊದಲ ಅಲೆಗಿಂತಲೂ ವೇಗವಾಗಿ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಸೋಂಕು, ಇನ್ನೊಂದೆಡೆ ಎರಡನೇ ಅಲೆ ಹೇರುತ್ತಿರುವ ಲಾಕ್‌ಡೌನ್ ಎಂಬ ಕರಾಳತೆ.
ಕೋವಿಡ್ ಎರಡನೇ ಅಲೆ ಹಾಗೂ ಮುಂಬರುವ ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಆರೋಗ್ಯ ತುರ್ತು ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಅನಿವಾರ್ಯತೆ ಬಂದೊದಗಿದೆ.
ಎರಡನೇ ಅಲೆ ಬಹುತೇಕ ಆರೋಗ್ಯ ವ್ಯವಸ್ಥೆಯನ್ನೇ ಬುಡಮೇಲಾಗಿಸಿದೆ. ಹೀಗಾಗಿ, ಎರಡನೇ ಅಲೆ ನಿಯಂತ್ರಣ ಹಾಗೂ ಮುಂಬರುವ ಅಲೆಗಳ ಭೀಕರತೆ ಮಟ್ಟಹಾಕಲು ದೊಡ್ಡ ಪ್ರಮಾಣದಲ್ಲಿ ಆರೋಗ್ಯ ತುರ್ತು ಕಾರ್ಯಕ್ರಮಗಳನ್ನು, ರಾಜ್ಯಾದ್ಯಂತ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಯನ್ನು ಅನುಷ್ಠಾನಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸರ್ಕಾರ ತಯಾರಿ ನಡೆಸಲು ಪ್ರಾರಂಭಿಸಿದೆ.
ಹೀಗಾಗಿ, ರಾಜ್ಯ ಸರ್ಕಾರ ತನ್ನ ವಾರ್ಷಿಕ ಬಜೆಟ್ ಬಹುಪಾಲನ್ನು ಈ ಸಾಂಕ್ರಾಮಿಕ ಸೋಂಕಿನ ನಿರ್ವಹಣೆಗಾಗಿನೇ ವಿನಿಯೋಗಿಸುವ ಅನಿವಾರ್ಯತೆಗೆ ಒಳಗಾಗಿದೆ.
ಆದರೆ, ಮೊದಲ ಲಾಕ್‌ಡೌನ್‌ನಿಂದ ಮಂಡಿಯೂರಿರುವ ರಾಜ್ಯದ ಆರ್ಥಿಕತೆ, ಇದೀಗ ಮತ್ತೊಂದು ಲಾಕ್‌ಡೌನ್ನಿಂದ ಸಂಪೂರ್ಣ ನೆಲಕಚ್ಚುವ ಆತಂಕ ಎದುರಾಗಿದೆ. ಹೀಗಾಗಿ, 2021-22ನೇ ಸಾಲಿನ ಬಜೆಟ್ ಲೆಕ್ಕಾಚಾರ ತಲೆಕೆಳಗಾಗುವ ಸಂಕಷ್ಟ ಎದುರಾಗಲಿದೆ.
ಇಲಾಖೆಗಳ ಅನುದಾನಕ್ಕೆ ಈ ಬಾರಿ ದೊಡ್ಡ ಕತ್ತರಿ : ಸದ್ಯ ಹೇರಿರುವ ಲಾಕ್‌ಡೌನ್ ಬಹುತೇಕ ಮೇ ತಿಂಗಳು ವಿಸ್ತರಣೆಯಾಗಿ, ಜೂನ್ ಮೂರನೇ ವಾರದವರೆಗೂ ಕಠಿಣ ನಿರ್ಬಂಧಗಳು ಜಾರಿಗೊಳಿಸುವ ಆತಂಕ ಇದೆ.
ಹೀಗಾಗಿ, ಸಂಪೂರ್ಣ ಆರ್ಥಿಕ ಚಟುವಟಿಕೆ ಪುನಾರಂಭಗೊಳ್ಳುವುದು ಅನುಮಾನ. ಇದು ಈಗಾಗಲೇ ಸೊರಗಿರುವ ರಾಜ್ಯದ ಬೊಕ್ಕಸದ ಮೇಲೆ ಇನ್ನಷ್ಟು ಹೊರೆ ಹಾಕಲಿದೆ.
ರಾಜ್ಯದ ಆದಾಯ ಸಂಗ್ರಹ ಸೀಮಿತವಾಗುವುದರಿಂದ ಯಥಾವತ್ ಬಜೆಟ್ ಅನುಷ್ಠಾನ ಬಹುತೇಕ ಅಸಾಧ್ಯ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜೊತೆಗೆ ಬಹುತೇಕ ಸಂಪನ್ಮೂಲವನ್ನು ಆರೋಗ್ಯ ಕ್ಷೇತ್ರಕ್ಕೆ ಕೋವಿಡ್ ನಿರ್ವಹಣೆಗಾಗಿ ವಿನಿಯೋಗಿಸಲು ಸರ್ಕಾರ ಈಗಾಗಲೇ ನಿರ್ಧರಿಸಿದೆ.
ಆದ್ದರಿಂದ ಈ ಬಾರಿ ಕಳೆದ ಬಾರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಇಲಾಖೆಗಳಿಗೆ ಮೀಸಲಿರಿಸಿದ ಬಜೆಟ್ ಅನುದಾನದಲ್ಲಿ ದೊಡ್ಡ ಕಡಿತ ಮಾಡುಬೇಕಾಗುತ್ತದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇತರ ಇಲಾಖೆಗಳ ಅನುದಾನವನ್ನು ಕಡಿತಗೊಳಿಸಿ ಆ ಹಣವನ್ನು ಆರೋಗ್ಯ ತುರ್ತು ಕಾರ್ಯಕ್ರಮಗಳಿಗೆ ವಿನಿಯೋಗಿಸುವುದು ಅನಿವಾರ್ಯವಾಗಲಿದೆ. ಹೀಗಾಗಿ, ಬಹುತೇಕ ಇಲಾಖೆಗಳ ಬಜೆಟ್ ಅನುದಾನ ಕಡಿತವಾಗಲಿದ್ದು, ಸೀಮಿತ ಸಂಪನ್ಮೂಲವನ್ನು ಕೋವಿಡ್ ನಿರ್ವಹಣೆಗೆ ಬಳಸಲು ಚಿಂತಿಸಲಾಗಿದೆ.
ಲಾಕ್‌ಡೌನ್, ನಿರ್ಬಂಧಗಳಿಂದ ಆದಾಯ ಸಂಗ್ರಹದಲ್ಲಾಗುವ ಖೋತಾದ ಸ್ಥಿತಿಗತಿಯನ್ನು ಪರಿಗಣಿಸಿದ ಬಳಿಕವಷ್ಟೇ ಇಲಾಖೆಗಳ ಬಜೆಟ್ ಅನುದಾನ ಕಡಿತದ ಅಂದಾಜು ಸಿಗಲಿದೆ ಎಂದು ತಿಳಿಸಿದ್ದಾರೆ.
ಕಳೆದ ಬಾರಿ ಲಾಕ್‌ಡೌನ್ ಹೇರಿದ ಆರ್ಥಿಕ ಸಂಕಷ್ಟದಿಂದ ಬಹುತೇಕ ಎಲ್ಲಾ ಇಲಾಖೆಗಳಿಗೆ ನೀಡುವ ಅನುದಾನಕ್ಕೆ ದೊಡ್ಡ ಮಟ್ಟಿನ ಕತ್ತರಿ ಹಾಕಲಾಯಿತು.
2020-21ರಲ್ಲಿ ಎಲ್ಲಾ ಇಲಾಖೆಗಳಿಗೆ ಹಂಚಿಕೆಯಾದ ಅನುದಾನದಲ್ಲಿ ಆರ್ಥಿಕ ಸಂಕಷ್ಟದ ಪರಿಣಾಮ ಸುಮಾರು 19,775 ಕೋಟಿ ರೂ. ಅನುದಾನವನ್ನು ಕಡಿತಗೊಳಿಸಲಾಗಿತ್ತು.
ದೊಡ್ಡ ಪ್ರಮಾಣದಲ್ಲಿ ಅನುದಾನ ಕಡಿತ ಮಾಡುವ ಮೂಲಕ ವೆಚ್ಚಗಳನ್ನು ನಿರ್ವಹಿಸಲಾಗಿತ್ತು. ಈ ಬಾರಿ ಇಲಾಖೆಗಳಿಗೆ ಹಂಚಿಕೆ ಮಾಡಿರುವ ಅನುದಾನದಲ್ಲಿ ಕಳೆದ ಬಾರಿಗಿಂತಲೂ ಹೆಚ್ಚಿನ ಕಡಿತ ಅನಿವಾರ್ಯವಾಗಲಿದ್ದು, ಈ ಅನುದಾನವನ್ನು ಆರೋಗ್ಯ ವಲಯದ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಲಾಗುತ್ತದೆ.
ಇದಕ್ಕಾಗಿ ಅನೇಕ ಇಲಾಖೆಗಳಿಗೆ ಹಂಚಿಕೆ ಮಾಡಲಾಗಿರುವ ಬಜೆಟ್ ಅನುದಾನದಲ್ಲಿ ಈ ಬಾರಿ ಸುಮಾರು 20-50% ವರೆಗೆ ಕಡಿತವಾಗುವ ಸಾಧ್ಯತೆ ಹೆಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಸಿಕೆ ಕಾರ್ಯಕ್ರಮಕ್ಕೆ ಬಹುಪಾಲು ಅನುದಾನ : ರಾಜ್ಯ ಸರ್ಕಾರ ಕೋವಿಡ್ ನಿರ್ವಹಣೆ ಜೊತೆಗೆ ಲಸಿಕೆ ಕಾರ್ಯಕ್ರಮವನ್ನು ಇನ್ನಷ್ಟು ವೇಗ ಹಾಗೂ ವ್ಯಾಪಕವಾಗಿ ಮಾಡಬೇಕಾಗಿದೆ. ಉಚಿತ ಲಸಿಕೆ ಹಾಕಲು ಸರ್ಕಾರ ಈಗಾಗಲೇ ತೀರ್ಮಾನಿಸಿದೆ.
ಹೀಗಾಗಿ, ಬೃಹತ್ ಪ್ರಮಾಣದ ಅನುದಾನವನ್ನು ಲಸಿಕೆ ಕಾರ್ಯಕ್ರಮಕ್ಕೆ ಆದ್ಯತೆ ಮೇರೆಗೆ ಹೊಂದಿಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಸಿಕೆ ಖರೀದಿಗಾಗಿ ಅಂದಾಜು 2,500 ಕೋಟಿ ರೂ. ಗೂ ಹೆಚ್ಚು ವೆಚ್ಚ ತಗುಲುವ ಸಾಧ್ಯತೆ ಇದೆ. ಹೀಗಾಗಿ, ರಾಜ್ಯದಲ್ಲಿ ಸಂಪೂರ್ಣ ಲಸಿಕಾ ಅಭಿಯಾನ ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಅಂದಾಜು 5,000 ಕೋಟಿ ರೂ. ಹೊರೆ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.