ಬೆಂಗಳೂರು: ರಾಜ್ಯದಲ್ಲಿ ಒಟ್ಟು 427 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 17 ಜನ ಸಾವನ್ನಪ್ಪಿದ್ದು 131 ಜನ ಗುಣಮುಖರಾಗಿದ್ದಾರೆ. ಉಳಿದ ಪ್ರಕರಣಗಳಲ್ಲಿ 274 ಜನರನ್ನು ಆಸ್ಪತ್ರೆಗಳಲ್ಲಿ ಪ್ರತ್ಯೇಕಿಸಲಾಗಿದ್ದು, 05 ಜನರನ್ನು ತೀವ್ರ ನಿಗಾ ಘಟಕಗಳಲ್ಲಿರಿಸಲಾಗಿದೆ. ಇಂದು 9 ಹೊಸ ಪ್ರಕರಣಗಳಲ್ಲಿ ಬೆಂಗಳೂರಿನಲ್ಲಿ 2, ಕಲಬುರಗಿಯಲ್ಲಿ 5 ಹಾಗೂ ಮೈಸೂರಿನಲ್ಲಿ 2 ಪ್ರಕರಣಗಳು ವರದಿಯಾಗಿವೆ. ಇನ್ನು ಪಿ - 419 ಸೋಂಕಿತ 74 ಜನರೊಂದಿಗೆ ಸಂಪರ್ಕ ಹೊಂದಿದ್ದು, 24 ಪ್ರೈಮರಿ ಹಾಗೂ 50 ಸೆಕೆಂಡರಿ ಕಾಂಟ್ಯಾಕ್ಟ್ ಹೊಂದಿದ್ದಾನೆ.
ಟ್ರಾವೆಲ್ ಹಿಸ್ಟರಿ ಹೀಗಿದೆ
ರೋಗಿ - 419 - ಬೆಂಗಳೂರಿನ 54 ವರ್ಷದ ವ್ಯಕ್ತಿಗೆ ಸೋಂಕು. ತೀವ್ರ ಉಸಿರಾಟದ ತೊಂದರೆ ಇದ್ದು, ಬೆಂಗಳೂರಿನಲ್ಲಿ ಚಿಕಿತ್ಸೆ ಮುಂದುವರಿದೆ.
ರೋಗಿ - 420 - ಬೆಂಗಳೂರಿನ 28 ವರ್ಷದ ಮಹಿಳೆಗೆ ಸೋಂಕು. ಪಿ - 208ರ ಸಂಪರ್ಕ ಬೆಂಗಳೂರಿನಲ್ಲಿ ಚಿಕಿತ್ಸೆ.
ರೋಗಿ - 421 - ಕಲಬುರಗಿಯ 46 ವರ್ಷದ ಮಹಿಳೆಗೆ ಸೋಂಕು. P - 222ರ ಸಂಪರ್ಕ ಕಲಬುರಗಿಯಲ್ಲಿ ಚಿಕಿತ್ಸೆ.
ರೋಗಿ - 422 - ಕಲಬುರಗಿಯ 57 ವರ್ಷದ ವ್ಯಕ್ತಿಗೆ ಸೋಂಕು. ತೀವ್ರ ಉಸಿರಾಟ ತೊಂದರೆ, ಕಲಬುರಗಿ ಚಿಕಿತ್ಸೆ.
ರೋಗಿ- 423 - ಕಲಬುರಗಿ 35 ವರ್ಷದ ಮಹಿಳೆಗೆ ಸೋಂಕು. P - 329 ರ ಸಂಪರ್ಕ ಕಲಬುರಗಿ ಚಿಕಿತ್ಸೆ.
ರೋಗಿ - 424 - ಕಲಬುರಗಿಯ 4 ತಿಂಗಳ ಗಂಡು ಮಗುವಿಗೂ ಸೋಂಕು. P - 329ರ ಸಂಪರ್ಕ ಕಲಬುರಗಿಯಲ್ಲಿ ಚಿಕಿತ್ಸೆ.
ರೋಗಿ - 425 - ಕಲಬುರಗಿ 26 ವರ್ಷದ ಯುವತಿಗೆ ಸೋಂಕು. P - 329ರ ಸಂಪರ್ಕ (P - 424 ರ ತಾಯಿ) ಕಲಬುರಗಿ ಚಿಕಿತ್ಸೆ
ರೋಗಿ - 426- ಮೈಸೂರಿನ ನಂಜನಗೂಡು ನಿವಾಸಿ 56 ವರ್ಷದ ವ್ಯಕ್ತಿಗೆ ಸೋಂಕು. P - 383ರ ಸಂಪರ್ಕ (ಮಾವ) ಮೈಸೂರಿನಲ್ಲಿ ಚಿಕಿತ್ಸೆ.
ರೋಗಿ - 427- ಮೈಸೂರು ಜಿಲ್ಲೆಯ ನಂಜನಗೂಡಿನ 32 ವರ್ಷದ ವ್ಯಕ್ತಿಗೆ ಸೋಂಕು. P - 52ರ ದ್ವಿತೀಯ ಸಂಪರ್ಕ, ಮೈಸೂರಿನಲ್ಲಿ ಚಿಕಿತ್ಸೆ ಮುಂದುವರಿದೆ.
ಕೋವಿಡ್ ಆಸ್ಪತ್ರೆಗಳಲ್ಲಿ ಕೋವಿಡೇತರ ಜವಾಬ್ದಾರಿ ನಿರ್ವಹಿಸುತ್ತಿರುವ ವೈದ್ಯ, ಸಿಬ್ಬಂದಿ ಸೇವೆ ಸದ್ಬಳಕೆಗೆ ಕ್ರಮ
ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಜೊತೆಗೆ ಇತರ ವೈದ್ಯಕೀಯ ಸೇವೆಗಳ ವ್ಯತ್ಯಯವಾಗದಂತೆ ವ್ಯವಸ್ಥೆ ಮಾಡಲಾಗಿದೆ. ಕೋವಿಡ್-19 ರ ಸೇವೆಗೆ ಬಳಸಿಕೊಳ್ಳಲಾಗುತ್ತಿರುವ ಆಸ್ಪತ್ರೆಗಳಲ್ಲಿ, ಕೋವಿಡೇತರ ಜವಾಬ್ದಾರಿ ನಿರ್ವಹಿಸುತ್ತಿರುವ ವೈದ್ಯ, ಸಿಬ್ಬಂದಿಯನ್ನು ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಾಯಿಸಲಾಗಿರುವ ಆಸ್ಪತ್ರೆಗಳಲ್ಲಿ ಇತರೆ ಚಿಕಿತ್ಸೆ ನೀಡುವ ಕೆಲಸಗಳಿಗೆ ಬಳಸಿಕೊಳ್ಳಲು ಸರ್ಕಾರವು ನಿರ್ಧರಿಸಿದೆ.
ವಿಶೇಷವಾಗಿ 'ಮೂತ್ರಪಿಂಡ ಸಮಸ್ಯೆ'ಗಳಿಂದ ಬಳಲುತ್ತಿರುವ ರೋಗಿಗಳಿಗೆ ನೋಂದಾಯಿಸಲ್ಪಟ್ಟಿರುವ ಹಾಗೂ ತಾತ್ಕಾಲಿಕವಾಗಿ ನೋಂದಾಯಿಸಲ್ಪಟ್ಟಿರುವ ಖಾಸಗಿ ಆಸ್ಪತ್ರೆಗಳಲ್ಲಿಯೂ ಡಯಾಲಿಸಿಸ್ ಚಿಕಿತ್ಸೆ ದೊರಕುವಂತೆ ಮಾಡಲು ಸರ್ಕಾರವು ನಿರ್ಧರಿಸಿದೆ.
ಹಲವು ರೀತಿಯ ನಿರ್ಮಾಣ ಕಾಮಗಾರಿಗಳಿಗೆ ಅನುಮತಿ
ಲಾಕ್ಡೌನ್ನಿಂದಾಗುತ್ತಿರುವ ಸಮಸ್ಯೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳದಲ್ಲಿಯೇ ಕಾರ್ಮಿಕರು ಲಭ್ಯವಿರುವ ನಿರ್ಮಾಣ ಕಾಮಗಾರಿಗಳೂ ಸೇರಿದಂತೆ ಹಲವು ಚಟುವಟಿಕೆಗಳಿಗೆ ನಾಳೆಯಿಂದ ಸರ್ಕಾರವು ಅವಕಾಶ ಕಲ್ಪಿಸಲಿದೆ. ಈ ಕುರಿತಂತೆ ಸರ್ಕಾರವು ಇಂದು ಅಧಿಸೂಚನೆಯನ್ನು ಹೊರಡಿಸಿದೆ.
ಕೋವಿಡ್-19 ಸೇವೆಯಲ್ಲಿರುವ ಅರೆ ವೈದ್ಯಕೀಯ ಗರ್ಭಿಣಿ ಸಿಬ್ಬಂದಿಗೆ ವಿನಾಯಿತಿ
ಕೋವಿಡ್-19 ಸೇವೆಯಲ್ಲಿರುವ ಅರೆ ವೈದ್ಯಕೀಯ ಸಿಬ್ಬಂದಿಯಲ್ಲಿ ಗರ್ಭಿಣಿಯರು ಹಾಗೂ ಒಂದು ವರ್ಷದೊಳಗಿನ ಮಗುವಿನ ತಾಯಂದಿರು ಇದ್ದಲ್ಲಿ, ಅವರುಗಳಿಗೆ ಈ ಸೇವೆಯನ್ನು ಸಲ್ಲಿಸುವುದರಿಂದ ವಿನಾಯಿತಿಯನ್ನು ಸರ್ಕಾರ ಕಲ್ಪಿಸಿದೆ.
ಪತ್ರಕರ್ತರ ಹಾಗೂ ಪೊಲೀಸರ ಆರೋಗ್ಯ ತಪಾಸಣೆಗೆ ಆರೋಗ್ಯ ಇಲಾಖೆಯ ವತಿಯಿಂದ ರೂಪುರೇಷೆಗಳು ಪ್ರಕಟ
ಪತ್ರಕರ್ತರ ಆರೋಗ್ಯ ತಪಾಸಣೆಗೆ ಸಂಬಂಧಿಸಿದಂತೆ ನಿನ್ನೆ ಮುಖ್ಯಮಂತ್ರಿಗಳು ಸೂಚನೆ ನೀಡಿದಂತೆ, ಆರೋಗ್ಯ ಇಲಾಖೆಯು ಬೆಂಗಳೂರಿನ ಪತ್ರಕರ್ತರಿಗೆ ಕೋವಿಡ್ ತಪಾಸಣೆಗಾಗಿ ರೂಪುರೇಷೆಗಳನ್ನು ಒಳಗೊಂಡ ನಿರ್ದೇಶನವನ್ನು ಹೊರಡಿಸಿದೆ. ಲಕ್ಷಣಗಳುಳ್ಳ ಪೊಲೀಸ್ ಸಿಬ್ಬಂದಿಗೂ ಆರೋಗ್ಯ ತಪಾಸಣೆಗೆ ಕ್ರಮ ವಹಿಸಲಾಗುವುದೆ ಎಂದು ಹೆಲ್ತ್ ಬುಲೆಟಿನ್ನಲ್ಲಿ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.