ಬೆಂಗಳೂರು: ಜಗತ್ತನ್ನು ಕಾಡುತ್ತಿರುವ ಮಹಾಮಾರಿ ಕೋವಿಡ್-19 ಪರೀಕ್ಷಾ ಸಾಮರ್ಥ್ಯದ ಟಾರ್ಗೆಟ್ನನ್ನು ರಾಜ್ಯ ಸರ್ಕಾರ ರೀಚ್ ಆಗಿದ್ದು, 10 ದಿನ ಮೊದಲೇ ಪ್ರತಿ ದಿನ 10 ಸಾವಿರ ಪರೀಕ್ಷೆ ನಡೆಸುವ ಶಕ್ತಿ ಪಡೆದುಕೊಂಡಿದೆ. ಹಾಗಾಗಿ ರ್ಯಾಂಡಮ್ ಟೆಸ್ಟ್ ಮಾಡಿದರೂ ಅದರ ವರದಿಗೂ ಇನ್ಮುಂದೆ ಹೆಚ್ಚು ಸಮಯ ಕಾಯಬೇಕಿಲ್ಲ.
ಹೌದು, ಮಾರ್ಚ್ 8 ರಂದು ರಾಜ್ಯದಲ್ಲಿ ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ದೃಢವಾಗುತ್ತಿದ್ದಂತೆ, ಹೆಚ್ಚು ಹೆಚ್ಚು ಜನರ ತಪಾಸಣೆ ಮಾಡಬೇಕು ಎನ್ನುವ ಸಂಕಲ್ಪ ತೊಟ್ಟಿದ್ದ ಸರ್ಕಾರ ಪರೀಕ್ಷಾ ಸಾಮರ್ಥ್ಯದಲ್ಲಿ ತನ್ನ ಗುರಿಯನ್ನು ತಲುಪಿದೆ.
ಬೆಂಗಳೂರಿನ ರಾಜೀವ್ ಗಾಂಧಿ ಎದೆರೋಗ ಸಂಶೋಧನಾ ಕೇಂದ್ರ ಹಾಗು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಾತ್ರವೇ ಕೊರೊನಾ ಪರೀಕ್ಷೆ ಮಾಡುವ ಲ್ಯಾಬ್ ಇದ್ದು, ಕೇವಲ 2 ಲ್ಯಾಬ್ಗಳಿಂದ ಆರಂಭಗೊಂಡ ಪರೀಕ್ಷಾ ಕೇಂದ್ರಗಳನ್ನು ಹಂತ ಹಂತವಾಗಿ ವಿಸ್ತರಿಸುತ್ತಾ ಬರಲಾಗಿದೆ.
![ಡಾ. ಸುಧಾಕರ್ ಟ್ವೀಟ್](https://etvbharatimages.akamaized.net/etvbharat/prod-images/kn-bng-09a-covid-testing-capacity-target-reached-special-story-7208080_22052020225704_2205f_1590168424_397.jpg)
ಆರಂಭದಲ್ಲಿ ಕೊರೊನಾ ಸೋಂಕು ಪೀಡಿತ ಜಿಲ್ಲೆಗಳಲ್ಲಿ ಕೊರೊನಾ ಪರೀಕ್ಷಾ ಕೇಂದ್ರ ಆರಂಭಿಸಲು ಆದ್ಯತೆ ನೀಡಲಾಯಿತು. ನಂತರ ಪ್ರತಿ ಜಿಲ್ಲಾ ಕೇಂದ್ರದಲ್ಲೂ ಕೋವಿಡ್ ಪ್ರಯೋಗಾಲಯ ಸ್ಥಾಪನೆ ಮಾಡುವ ಜೊತೆಗೆ ರಾಜ್ಯದಲ್ಲಿ ಮೇ ತಿಂಗಳ ಅಂತ್ಯಕ್ಕೆ 60 ಪ್ರಯೋಗಾಲಯ ಸ್ಥಾಪನೆ ಹಾಗು ಪ್ರತಿದಿನ 10 ಸಾವಿರ ಕೊರೊನಾ ಪರೀಕ್ಷೆ ಮಾಡುವ ಗುರಿಯನ್ನು ಅಧಿಕೃತವಾಗಿ ಪ್ರಕಟಿಸಿತು.
ಇದೀಗ 10 ದಿನ ಮೊದಲೇ ಎರಡು ಟಾರ್ಗೆಟ್ಗಳಲ್ಲಿ ಒಂದನ್ನು ರೀಚ್ ಮಾಡಿದೆ. ಪ್ರಯೋಗಾಲಯ ಸ್ಥಾಪನೆ ಗುರಿ ಮೊದಲೇ ಸಾಧಿಸದಿದ್ದರೂ ಪರೀಕ್ಷಾ ಸಾಮರ್ಥ್ಯದ ಗುರಿ ತಲುಪುವಲ್ಲಿ ರಾಜ್ಯದ ಆರೋಗ್ಯ ಇಲಾಖೆ ಸಫಲವಾಗಿದೆ. 60 ಪ್ರಯೋಗಾಲಯಗಳ ಸ್ಥಾಪನೆ ಗುರಿಯಲ್ಲಿ ಈಗಾಗಲೇ 53 ಸ್ಥಾಪಿಸಲಾಗಿದ್ದು, ಇನ್ನು ಕೇವಲ 7 ಪರೀಕ್ಷಾ ಕೇಂದ್ರ ಸ್ಥಾಪನೆ ಮಾತ್ರ ಬಾಕಿ ಇದೆ. ಇನ್ನೂ 9 ದಿನ ಸಮಯ ಬಾಕಿ ಇದೆ. ಪ್ರತಿದಿನ 10 ಸಾವಿರ ಪರೀಕ್ಷೆ ಮಾಡುವ ಸಾಮರ್ಥ್ಯದ ಗುರಿಯನ್ನು ಮೀರಿ ಪರೀಕ್ಷಾ ಸಾಮರ್ಥ್ಯ 12 ಸಾವಿರದ ಗಡಿ ದಾಡಿದೆ.
ರಾಜ್ಯದಲ್ಲಿ ಕೊರೊನಾ ಪತ್ತೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅದಕ್ಕೆ ಪೂರಕವಾಗಿ ಶಂಕಿತರ ಪರೀಕ್ಷಾ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದು ಅನಿವಾರ್ಯವಾಗಿದೆ. ಸೀಲ್ಡೌನ್ ಪ್ರದೇಶಗಳಲ್ಲಿ ರ್‍ಯಾಂಡಮ್ ಪರೀಕ್ಷೆ ನಡೆಸಿ ತ್ವರಿತ ವರದಿ ಪಡೆಯುವ ಸಲುವಾಗಿ ಪರೀಕ್ಷಾ ಸಾಮರ್ಥ್ಯ ವೃದ್ಧಿಸಿಕೊಳ್ಳುತ್ತಿದೆ. ಒಂದು ವೇಳೆ ಸಮುದಾಯಕ್ಕೆ ಸೋಂಕು ತಗುಲಿದರೆ ಅಥವಾ ಅಂತಹ ಸನ್ನಿವೇಶದ ಸಮೀಪಕ್ಕೆ ತಲುಪಿದರೆ ಮಾಸ್ ತಪಾಸಣೆ ನಡೆಸಿ ತ್ವರಿತ ವರದಿ ಪಡೆಯಲು ಪೂರಕವಾಗಿ ಪರೀಕ್ಷಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕಿದ್ದು, ಆ ನಿಟ್ಟಿನಲ್ಲಿ ರಾಜ್ಯ ತನ್ನ ಟಾರ್ಗೆಟ್ ರೀಚ್ ಆಗಿದೆ.
ಈವರೆಗೆ ರಾಜ್ಯದಲ್ಲಿ ಒಟ್ಟು 1,86,526 ಕೊರೊನಾ ಪರೀಕ್ಷೆ ನಡೆಸಿದ್ದು, ಅದರಲ್ಲಿ 1743 ಕೊರೊನಾ ಪಾಸಿಟಿವ್ ವರದಿಗಳು ಬಂದಿವೆ. ಸದ್ಯ ನಿತ್ಯ 12 ಸಾವಿರ ಪರೀಕ್ಷೆ ನಡೆಸುವ ಸಾಮರ್ಥ್ಯ ತಲುಪಿದ್ದು, ಇನ್ನೂ 7 ಲ್ಯಾಬ್ಗಳ ಸ್ಥಾಪನೆ ಬಾಕಿ ಇದೆ. 60 ಲ್ಯಾಬ್ಗಳು ಪೂರ್ಣ ಸಿದ್ದವಾದಲ್ಲಿ ನಿತ್ಯ ಗರಿಷ್ಠ 15 ಸಾವಿರ ಕೊರೊನಾ ಪರೀಕ್ಷೆ ನಡೆಸಬಹುದಾಗಿದೆ. 10 ದಿನದಲ್ಲೇ 1.5 ಲಕ್ಷ ಜನರ ಪರೀಕ್ಷೆ ನಡೆಸಬಹುದಾಗಿದೆ. ಆದರೂ ಪ್ರತಿ ದಿನ 10 ಸಾವಿರ ಪರೀಕ್ಷೆ ನಡೆಸಿದರೂ ಕೇವಲ 10 ದಿನದಲ್ಲಿ 1 ಲಕ್ಷ ಶಂಕಿತರ ಪರೀಕ್ಷೆ ನಡೆಸುವ ಸಾಮರ್ಥ್ಯವನ್ನು ರಾಜ್ಯ ಹೊಂದಿದೆ.
ಪರೀಕ್ಷಾ ಸಾಮರ್ಥ್ಯ ವೃದ್ಧಿ ವಿವರ:
ಏಪ್ರಿಲ್-7 : 500
ಏಪ್ರಿಲ್-13: 1000
ಏಪ್ರಿಲ್-17: 2000
ಏಪ್ರಿಲ್-22: 3000
ಏಪ್ರಿಲ್-28: 4000
ಮೇ- 04 : 5000
ಮೇ- 14 : 6000
ಮೇ- 14 : 7000
ಮೇ- 20 : 8000
ಮೇ -22 : 12000