ಬೆಂಗಳೂರು: ನಗರದ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಸೋಮವಾರ ಕೊರೊನಾ ಕುರಿತ ಕಾಂಗ್ರೆಸ್ ಟಾಸ್ಕ್ ಫೋರ್ಸ್ ಸಭೆ ನಡೆಯಿತು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿ ಸಚಿವರಾದ ಟಿ.ಬಿ. ಜಯಚಂದ್ರ, ರಾಮಲಿಂಗಾರೆಡ್ಡಿ, ಹೆಚ್.ಎಂ ರೇವಣ್ಣ, ಚಲುವರಾಯಸ್ವಾಮಿ, ಯು.ಟಿ. ಖಾದರ್, ಶಿವಶಂಕರರೆಡ್ಡಿ, ಡಾ. ಶರಣಪ್ರಕಾಶ ಪಾಟೀಲ್, ಸಿ.ಎಸ್. ನಾಡಗೌಡ, ಶಾಸಕ ಡಾ. ರಂಗನಾಥ್, ಎಂಎಲ್ಸಿ ನಾರಾಯಣಸ್ವಾಮಿ, ಮಾಜಿ ಸಂಸದರಾದ ಚಂದ್ರಪ್ಪ, ವಿ.ಎಸ್. ಉಗ್ರಪ್ಪ ಮತ್ತಿತರರು ಭಾಗವಹಿಸಿದ್ದರು.

ರಾಜ್ಯದ ಕೊರೊನಾ ಸ್ಥಿತಿಗತಿಯ ನೈಜಸ್ಥಿತಿ ಅರಿಯಲು ಕಾಂಗ್ರೆಸ್ ಟಾಸ್ಕ್ ಫೋರ್ಸ್ ರಚನೆಮಾಡಲಾಗಿದೆ. ಇದರ ಸದಸ್ಯರು ಎಲ್ಲ ಜಿಲ್ಲೆಗಳಿಗೆ ಹೋಗಿ ಬಂದಿದ್ದಾರೆ. ಹಲವು ಕಡೆ ಅವರು ಮಾಹಿತಿ ಸಂಗ್ರಹಿಸಿದ್ದಾರೆ. ಇದೆಲ್ಲದರ ಬಗ್ಗೆ ಚರ್ಚೆ ಇಂದಿನ ಸಭೆಯಲ್ಲಿ ನಡೆಯಿತು.

ಕೊರೊನಾ ಸಂಬಂಧ ಜನರಲ್ಲಿ ಜಾಗೃತಿ ಮೂಡಿಸುವುದು, ತೊಂದರೆಯಲ್ಲಿರುವ ಜನರಿಗೆ ನೆರವಾಗುವ ಕುರಿತಂತೆ ಚರ್ಚೆ ನಡೆಸುವುದು, ಕೋವಿಡ್-19 ವಿಕೋಪಕ್ಕೆ ತೆರಳಿದರೆ ಆ ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಮಾರ್ಗದರ್ಶನ ನೀಡಲು, ವಸ್ತುಸ್ಥಿತಿಗೆ ಹತ್ತಿರವಾಗಿ ಜವಾಬ್ದಾರಿಯುತ ಮಾಹಿತಿ ಒಳಗೊಂಡ ವರದಿ ಸಿದ್ದಪಡಿಸಲು ಪಕ್ಷದ ಟಾಸ್ಕ್ ಫೋರ್ಸ್ಗೆ ಸೂಚಿಸಲಾಗಿದೆ. ಇದು ಯಾವ ಹಂತದಲ್ಲಿದೆ ಎಂಬ ಚರ್ಚೆ ಕೂಡ ನಡೆಯಿತು. ಟಾಸ್ಕ್ ಫೋರ್ಸ್ ಅಧ್ಯಕ್ಷ ರಮೇಶ್ ಕುಮಾರ್ ಸಭೆಯಲ್ಲಿ ಉಪಸ್ಥಿತರಿರಲಿಲ್ಲ.