ಶಿವಮೊಗ್ಗ : ಕರೋನಾ ವೈರಸ್ ಸಂಪೂರ್ಣ ಗುಣಮುಖವಾಗುವ ರೋಗ. ಈ ಬಗ್ಗೆ ಗಾಬರಿಪಡುವ ಅಗತ್ಯವಿಲ್ಲ. ಆದರೆ, ರೋಗ ಬಾರದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್ ತಿಳಿಸಿದರು.
ಕರೋನಾ ವೈರಸ್ ಕುರಿತು ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈವರೆಗೆ ಯಾವುದೇ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿಲ್ಲ. ಕೊರೊನಾ ಪೀಡಿತ ದೇಶಗಳಿಗೆ ಪ್ರವಾಸ ಕೈಗೊಳ್ಳದಂತೆ ನಾಗರಿಕರಿಗೆ ಸಲಹೆ ನೀಡಲಾಗಿದೆ. ವಿದೇಶಗಳಿಂದ ಆಗಮಿಸುತ್ತಿರುವವರನ್ನು ವಿಮಾನ ನಿಲ್ದಾಣದಲ್ಲೇ ತಪಾಸಣೆ ಮಾಡಿ ಬಿಡಲಾಗುತ್ತಿದೆ. ಆದರೂ ಅಂತಹವರ ಮೇಲೆ ನಾಲ್ಕು ವಾರಗಳ ಕಾಲ ನಿಗಾವಹಿಸಲು ಸೂಚಿಸಲಾಗಿದೆ.
ಶಿಮ್ಸ್ನಲ್ಲಿ ಪ್ರಯೋಗಾಲಯ: ಕೊರೊನಾ ವೈರಸ್ ಪತ್ತೆಗೆ ಶಿವಮೊಗ್ಗ ಮೆಡಿಕಲ್ ಕಾಲೇಜು ಪ್ರಯೋಗಾಲಯದಲ್ಲಿ ವ್ಯವಸ್ಥೆ ಇದೆ. ಕರೋನಾ ವೈರಸ್ ಪರೀಕ್ಷೆಯನ್ನು ಕೇವಲ ಶಿಮ್ಸ್ನಲ್ಲಿ ಮಾತ್ರ ನಿರ್ವಹಿಸಬೇಕು. ಯಾವುದೇ ಖಾಸಗಿ ಆಸ್ಪತ್ರೆಗಳಲ್ಲಿ ಕೈಗೊಳ್ಳಲು ಅವಕಾಶವಿಲ್ಲ. ಮಾಸ್ಕ್ ಇತ್ಯಾದಿ ಅಗತ್ಯ ಸಾಮಾಗ್ರಿಗಳ ದರವನ್ನು ಹೆಚ್ಚಿಸಿ ಮಾರುವುದರ ಬಗ್ಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ದರ ಹೆಚ್ಚಳ ಬಗ್ಗೆ ದೂರುಗಳು ಬಂದರೆ ಅಂತಹ ಅಂಗಡಿಗಳ ಪರವಾನಿಗೆ ರದ್ದುಗೊಳಿಸಲಾಗುವುದು. ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ಗಳು ಈ ಕುರಿತು ನಿಗಾವಹಿಸಬೇಕು ಎಂದರು.
ಪೋಷಕರಿಗೆ ಸೂಚನೆ: ಮಕ್ಕಳಲ್ಲಿ ಜ್ವರ, ನೆಗಡಿ, ಕೆಮ್ಮು ಕಾಣಿಸಿಕೊಂಡರೆ ಮಕ್ಕಳನ್ನು ಶಾಲೆಗೆ ಕಳುಹಿಸದಿರುವುದು ಉತ್ತಮ. ಕೈಯನ್ನು ಸರಿಯಾಗಿ ತೊಳೆಯುವಂತೆ ವಿದ್ಯಾರ್ಥಿಗಳಿಗೆ ಈಗಾಗಲೇ ಸೂಚನೆಗಳನ್ನು ನೀಡಲಾಗಿದೆ. ವೈಯಕ್ತಿಕ ಸ್ವಚ್ಛತೆ ಬಗ್ಗೆ ಪ್ರತಿಯೊಬ್ಬರೂ ಗಮನ ಹರಿಸಬೇಕು. ಜ್ವರ, ಕೆಮ್ಮು ಕಾಣಿಸಿಕೊಂಡರೆ ನಿರ್ಲಕ್ಷ್ಯ ವಹಿಸದೆ ವೈದ್ಯರಿಗೆ ತೋರಿಸಿ ಸರಿಯಾದ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.