ಬೆಂಗಳೂರು: ಜಯನಗರ 8ನೇ ಹಂತದಲ್ಲಿನ ಒಂದೇ ಕುಟುಂಬದ ಇಬ್ಬರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಇನ್ನು ಈ ಕೇಸ್ ಪತ್ತೆ ಆಗುತ್ತಿದ್ದಂತೆ ವಾರ್ಡ್ ನಂ 169 ಶಾಕಂಬರಿ ನಗರ ವಾರ್ಡ್ ಕಾರ್ಪೊರೇಟರ್ ಮಾಲತಿ ಸೋಮಶೇಖರ್ ಅವರು ಬಿಬಿಎಂಪಿ ಕಡೆಯಿಂದ ಎಂಟನೇ ಹಂತದ ರಸ್ತೆಗಳಲ್ಲಿ ಔಷದಿ ಸಿಂಪಡಣೆ ಮಾಡಿಸಿದ್ದಾರೆ.
43ನೇ ಕ್ರಾಸ್ ನಿವಾಸಿಯಾದ ಸೋಂಕಿತರು ಮಾರ್ಚ್ 19 ರಂದು ಬ್ರೆಜಿಲ್ನಿಂದ ಬೆಂಗಳೂರಿಗೆ ಬಂದಿದ್ದರು. ಐದು ದಿನಗಳಿಂದ ಹೋಮ್ ಕ್ವಾರಂಟೈನ್ನಲ್ಲಿದ್ದರು. ಬುಧವಾರ ರಾತ್ರಿ ಜ್ವರ ಹೆಚ್ಚಾದ ಹಿನ್ನೆಲೆಯಲ್ಲಿ ಇಬ್ಬರನ್ನು ಪ್ರತ್ಯೇಕ ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ದು, ಚೆಕ್ ಮಾಡಿಸಿದಾಗ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ಗೊತ್ತಾಗಿದೆ.
ಅಲ್ಲದೇ ಅವರ 29 ವಯಸ್ಸಿನ ಮಗನನ್ನು ಈಗ ಆಸ್ಪತ್ರೆಗೆ ಕರೆದೊಯ್ದಿದ್ದು ವರದಿ ಬಂದ ಬಳಿಕ ಅವರ ಬಗ್ಗೆ ಮಾಹಿತಿ ಸಿಗಲಿದೆ. ಒಂದೇ ಮನೆಯಲ್ಲಿ ಇಬ್ಬರಿಗೆ ಕೊರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಯನಗರ 8ನೇ ಹಂತದ ಜನರು ಅತಂಕಗೊಂಡಿದ್ದಾರೆ.
ಇನ್ನು, ಜನರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ಕಾರ್ಪೊರೇಟರ್ ಮಾಲತಿ ಸೋಮನಾಥ ಸ್ವತಃ ಅವರೇ ರೋಡಿಗಿಳಿದು, ಕೊರೊನಾ ಕಾಣಿಸಿಕೊಂಡವರ ಮನೆ ಹಾಗೂ ಸುತ್ತಮುತ್ತಲಿನ ಏರಿಯಾದಲ್ಲಿ ಎಲ್ಲಾ ಮನೆ ಬಳಿ ಔಷಧಿ ಸಿಂಪಡಿಸಿದ್ದಾರೆ. ಅಲ್ಲದೇ ಹೆಲ್ಪ್ ಲೈನ್ ಕೂಡ ಓಪನ್ ಮಾಡಿದ್ದು, ಜನರು ಆತಂಕಪಡುವ ಆಗತ್ಯ ಇಲ್ಲವೆಂದು ಧೈರ್ಯ ತುಂಬಿದ್ದಾರೆ.
ಈಟಿವಿ ಭಾರತ ಜೊತೆ ಮಾತನಾಡಿದ ಕಾರ್ಪೊರೇಟರ್ ಮಾಲತಿ ಸೋಮಶೇಖರ್ ಅವರು, ನಿನ್ನೆ ಸೋಂಕಿತರ ಬಗ್ಗೆ ನಮಗೆ ಮಾಹಿತಿ ಸಿಕ್ಕಿತ್ತು. ನಂತರ ಅವರನ್ನು ಬಿಬಿಎಂಪಿ ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆ ಮಾಡಿದಾಗ ಸೋಂಕು ತಗುಲಿರುವುದು ಗೊತ್ತಾಗಿದೆ. ನಂತರ ಅವರ ಮನೆ ಸುತ್ತ ಮುತ್ತಲಿನ ಎಲ್ಲಾ ಕಡೆ ಔಷಧಿ ಸಿಂಪಡಣೆ ಮಾಡಿಸಿದ್ದೇವೆ ಎಂದರು.
ಅಲ್ಲದೇ ವಿದೇಶದಿಂದ ಬಂದಿರುವವರು ದಯವಿಟ್ಟು ಹೊರಗೆ ಬರಬೇಡಿ ಎಂದು ಅವರನ್ನು ಸಂಪರ್ಕ ಮಾಡಿ ಮನವಿ ಮಾಡಿದ್ದೇವೆ. ಜೊತೆಗೆ ನಾವು ಜನರಿಗೆ ಅಗತ್ಯ ಸೇವೆಗೆ ತೊಂದರೆ ಆಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಹತ್ತು ಜನರ ತಂಡವೊಂದನ್ನು ರೆಡಿ ಮಾಡಿದ್ದೇವೆ. ದಯವಿಟ್ಟು ಯಾರು ಮನೆಯಿಂದ ಹೊರ ಬರಬೇಡಿ. ಒಂದು ವೇಳೆ ಅಗತ್ಯ ವಸ್ತುಗಳಿಗಾಗಿ ಹೊರಬಂದರು ಮಾಸ್ಕ್ ಧರಿಸಿ ಒಬ್ಬರಿಂದ ಒಬ್ಬರ ನಡುವೆ ಅಂತರ ಕಾಯ್ದುಕೊಳ್ಳಿ ಎಂದು ಈಟಿವಿ ಭಾರತ ಮೂಲಕ ಜಯನಗರ ಜನರಲ್ಲಿ ಮಾಲತಿ ಸೋಮಶೇಖರ್ ಮನವಿ ಮಾಡಿದ್ದಾರೆ.