ಬೆಂಗಳೂರು: ನಗರದಲ್ಲಿ ವ್ಯಾಪಕವಾಗಿ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆ ಕೊರೊನಾ ವಾರಿಯರ್ಗಳಾದ ಪೊಲೀಸ್ ಸಿಬ್ಬಂದಿಗಳ ಕುಟುಂಬಸ್ಥರು ಭಯಭೀತರಾಗಿದ್ದು, ಎಲ್ಲಿ ನಮ್ಮ ಮನೆಯವರಿಗೆ ಸೋಂಕು ತಗುಲಿ ಬಿಡುತ್ತೋ ಎಂಬ ಆತಂಕದಲ್ಲಿದ್ದಾರೆ.
ಈಗಾಗಲೇ ನಗರದಲ್ಲಿ 70 ಪೊಲೀಸರಿಗೆ ಸೋಂಕು ತಗುಲಿದೆ. 27 ಠಾಣೆಗಳನ್ನು ಸೀಲ್ಡೌನ್ ಮಾಡಿ ಮುಂಜಾಗೃತ ಕ್ರಮವಾಗಿ ಸಿಬ್ಬಂದಿ ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೇ, ಠಾಣೆ ಮತ್ತು ಪೊಲೀಸರು ವಾಸ ಮಾಡುವ ಕ್ವಾಟರ್ಸ್ಗಳನ್ನು ಸ್ಯಾನಿಟೈಸ್ ಮಾಡುವಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚನೆ ನೀಡಿದ್ದಾರೆ.
ನಗರದಲ್ಲಿ ಹಲವೆಡೆ ಠಾಣೆಗಳು ಮತ್ತು ಪೊಲೀಸ್ ಕ್ವಾಟರ್ಸ್ಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಇನ್ನು ಕೆಲವೆಡೆ ಸ್ಯಾನಿಟೈಸ್ ಮಾಡಿಲ್ಲ. ಈ ಕುರಿತು ಪೊಲೀಸ್ ಕ್ವಾಟರ್ಸ್ನಲ್ಲಿ ವಾಸಿಸುವ ಕುಟುಂಬಗಳನ್ನು ಈ ಟಿವಿ ಭಾರತ ಮಾತಾನಾಡಿಸಿದಾಗ ಕೆಲವೊಂದು ಕ್ವಾಟರ್ಸ್ಗಳ ಬಳಿ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಿಲ್ಲ. ಜೊತೆಗೆ ಸ್ಯಾನಿಟೈಸರ್, ಮಾಸ್ಕ್ ವಿತರಣೆ ಸೇರಿ ಕ್ವಾಟರ್ಸ್ ಬಳಿ ಆರೋಗ್ಯ ತಪಾಸಣೆ ಸೇರಿದಂತೆ ಯಾವುದನ್ನೂ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ನನ್ನ ಪತಿ ಬೆಳಗ್ಗೆ ಎದ್ದು ಕೆಲಸ ಅಂತಾ ಹೊಗ್ತಾರೆ. ಅವರು ಹೊರಗಡೆ ಭದ್ರತೆಗೆ ಎಂದು ತೆರಳಿದಾಗ ಎಲ್ಲಿ ಕೊರೊನಾ ಸೋಂಕು ತಗುಲುತ್ತೋ ಎನ್ನುವ ಭಯ ಇದೆ. ಹಗಲು ಕೆಲಸ ಮಾಡಿ ರಾತ್ರಿ ತುಂಬಾ ಸುಸ್ತಾಗಿ ಬರ್ತಾರೆ. ಪೊಲೀಸ್ ಸಿಬ್ಬಂದಿಗೆ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ತಗುಲುತ್ತಿದೆ. ಕ್ವಾಟರ್ಸ್ನಲ್ಲಿರುವ ಕುಟುಂಬಸ್ಥರಿಗೆ ಕೊರೊನಾ ಭಯ ಕಾಡ್ತಿದೆ. ಕೆಲವರು ತಮ್ಮ ಕುಟುಂಬಸ್ಥರನ್ನು ಹಳ್ಳಿಗಳಿಗೆ ಕಳುಹಿಸಿದ್ದಾರೆ. ನನ್ನ ಗಂಡ ಕೂಡ ಹಳ್ಳಿಗೆ ಹೋಗು ಎಂದು ಒತ್ತಾಯ ಮಾಡುತ್ತಿದ್ದಾರೆ. ನನಗೆ ಕೊರೊನಾ ಬಂದ್ರು ಪರವಾಗಿಲ್ಲ. ನನ್ನ ಕುಟುಂಬಸ್ಥರಿಗೆ ಬರೋದು ಬೇಡ ಅಂತಾರೆ. ಆದರೆ, ಕೈ ಹಿಡಿದ ಗಂಡನನ್ನು ಕಷ್ಟ ಕಾಲದಲ್ಲಿ ಬಿಟ್ಟು ಹೋದ್ರೆ, ಹೆಂಡತಿ ಅಂತಾರಾ ಎಂದು ಪೊಲೀಸ್ ಸಿಬ್ಬಂದಿಯೊಬ್ಬರ ಪತ್ನಿ ಅಳಲು ತೋಡಿಕೊಂಡಿದ್ದಾರೆ.
ಪೊಲೀಸರಿಗೆ ಹೆಚ್ಚಾಗಿ ಸೋಂಕು ಹರಡುತ್ತಿದೆ. ಅವರಿಗೆ ಚಿಕಿತ್ಸೆ ಕೊಡುತ್ತಿರುವ ಆಸ್ಪತ್ರೆಗಳಲ್ಲಿ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಕೊರೊನಾ ವಾರಿಯರ್ ಅಂತ ಹೆಸರಿಗೆ ಮಾತ್ರ ಕರೆಯುತ್ತಾರೆ. ಸಾರ್ವಜನಿಕರ ಸೇವೆ ಮಾಡುತ್ತಿರುವವರ ಆರೋಗ್ಯ ನೋಡ್ಕೊಳ್ಳುವುದು ಸರ್ಕಾರದ ಕರ್ತವ್ಯವಲ್ಲವೇ ಎಂದು ಪ್ರಶ್ನಿಸಿದ್ದಾರೆ.