ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿಯ ವಿಚಾರಣೆ ನಡೆಸಿದ್ದ ಸಿಸಿಬಿಯ 14 ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಮಂಗಳೂರಿನ ನ್ಯಾಯವಾದಿ ನೌಶದ್ ಕಾಶಿಂಜಿ ಕೊಲೆ ಹಾಗೂ ಖಾಸಗಿ ವಾಹಿನಿ ಮಾಲೀಕನ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಜೈಲಿನಿಂದ ಕರೆ ತಂದು ರವಿ ಪೂಜಾರಿಯ ವಿಚಾರಣೆ ನಡೆಸಲಾಗಿತ್ತು. ಮಡಿವಾಳ ಬಳಿಯ ಎಫ್ಎಸ್ಎಲ್ ಕಚೇರಿಯಲ್ಲಿ ಮುಂಜಾಗ್ರತಾ ಕ್ರಮಗಳೊಂದಿಗೆ ವಿಚಾರಣೆ ನಡೆಸಲಾಗಿತ್ತು. ಆದರೆ ಇದೀಗ ವಿಚಾರಣೆ ನಡೆಸಿದ್ದ ಎಸಿಪಿ, ಇನ್ಸ್ಪೆಕ್ಟರ್, ಟೈಪಿಸ್ಟ್ ಸೇರಿದಂತೆ 14 ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸದ್ಯ ರವಿ ಪೂಜಾರಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಅಲ್ಲಿನ ಕೈದಿಗಳು ಮತ್ತು ಸಿಬ್ಬಂದಿಗೂ ಸೋಂಕು ಹರಡುವ ಭೀತಿ ಶುರುವಾಗಿದೆ.
ಸಿಸಿಬಿ ಸಿಬ್ಬಂದಿಗೆ ಕೊರೊನಾ ಸೋಕು ತಗುಲಿರುವುದು ದೃಢಪಡುತ್ತಿದ್ದಂತೆ ವಿಚಾರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ತನಿಖೆ ನಡೆಸಿದ ಅಧಿಕಾರಿಗಳು ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ಮುಂಬೈ ಪೊಲೀಸರಿಂದ ಪಾತಕಿ ನಿರಾಳ:
ಮುಂಬೈ ಪೊಲೀಸರು ತನ್ನನ್ನು ವಶಕ್ಕೆ ಪಡೆಯುತ್ತಾರೆ ಎಂಬ ಭೀತಿ ರವಿ ಪೂಜಾರಿಗಿತ್ತು. ಹೀಗಾಗಿ ಅವರ ವಶಕ್ಕೆ ನೀಡದಂತೆ ಅಧಿಕಾರಿಗಳ ಮುಂದೆ ಕೈ ಮುಗಿದು ಬೇಡಿಕೊಂಡಿದ್ದ ಎನ್ನಲಾಗಿದೆ. ಆದರೆ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿವೆ. ಈ ನಡುವೆ ವಿಚಾರಣೆ ನಡೆಸಿದ್ದ ಸಿಸಿಬಿ ಅಧಿಕಾರಿಗಳಿಗೆ ಸೋಂಕು ತಗುಲಿದೆ. ಹೀಗಾಗಿ ಸದ್ಯಕ್ಕೆ ಮುಂಬೈ ಪೊಲೀಸರು ವಿಚಾರಣೆ ಮುಂದೂಡಿದ್ದಾರೆ. ಇದರಿಂದ ರವಿ ಪೂಜಾರಿ ತಾತ್ಕಾಲಿಕವಾಗಿ ನಿರಾಳನಾಗಿದ್ದಾನೆ. ಸದ್ಯ ಆತನನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಗಾದಲ್ಲಿ ಇಡಲಾಗಿದೆ.