ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ನೂರಕ್ಕಿಂತ ಹೆಚ್ಚು ಮಂದಿಯಲ್ಲಿ ಕೊರೊನಾ ಪಾಸಿಟಿವ್ ಕಂಡುಬರುತ್ತಿತ್ತು. ಆದರೆ ಕಳೆದ ಶನಿವಾರದಿಂದ ಐನೂರರ ಗಡಿ ದಾಟಿ, ಸೋಂಕಿತರು ಕಂಡುಬರುತ್ತಿದ್ದಾರೆ. ಭಾನುವಾರ ಒಂದೇ ದಿನ 783 ಮಂದಿಯಲ್ಲಿ ಸೋಂಕು ಕಂಡುಬಂದಿರುವುದರಿಂದ ಎಲ್ಲರೂ ದಿಗ್ಭ್ರಮೆಗೊಂಡಿದ್ದಾರೆ.
ಬಿಬಿಎಂಪಿ ಅಧಿಕಾರಿ ವರ್ಗವೂ ಬೆಚ್ಚಿಬಿದ್ದಿದೆ. ಶುಕ್ರವಾರದ ವರೆಗೆ 150 , 200 ರ ಒಳಗೆ ಕಂಡುಬರುತ್ತಿದ್ದ ಸೋಂಕಿತರ ಸಂಖ್ಯೆ, ಶನಿವಾರ 596, ಭಾನುವಾರ 783, ಸೋಮವಾರ 738, ಮಂಗಳವಾರ 503 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ನಗರದಲ್ಲಿ ಕೇವಲ ನಾಲ್ಕು ದಿನಕ್ಕೆ 2620 ಮಂದಿಗೆ ಕೊರೊನಾ ವಕ್ಕರಿಸಿ ಸೋಂಕಿತರ ಸಂಖ್ಯೆ 4555 ಕ್ಕೆ ಏರಿಕೆಯಾಗಿದೆ. ಅಸಲಿಗೆ ಸರ್ಕಾರದ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಇಷ್ಟು ಪ್ರಮಾಣದಲ್ಲಿ ರೋಗಿಗಳು ಪತ್ತೆಯಾಗುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಇದರಿಂದ ನಗರದ ಬಹುತೇಕ ವಾರ್ಡ್ಗಳಲ್ಲಿ ಕೋವಿಡ್ ರೋಗಿಗಳು ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಪರದಾಡಿದ್ದಲ್ಲದೆ, ಇಬ್ಬರು ಮೃತಪಟ್ಟಿದ್ದಾರೆ.
ಐಸಿಯುನಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ತೀವ್ರ ಏರಿಕೆಯಾಗಿದ್ದು, 171 ಮಂದಿ ಕ್ರಿಟಿಕಲ್ ಸ್ಟೇಜ್ನಲ್ಲಿದ್ದಾರೆ. ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ಸಿಬ್ಬಂದಿ ಸಹ ಕೋವಿಡ್ ಪೀಡಿತರಾಗುತ್ತಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ 11 ಶುಶ್ರೂಕಿಯರು ಹಾಗೂ ರಾಜಾಜಿನಗರ ಇಎಸ್ಐ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗೆ ಕೊರೊನಾ ತಗುಲಿದೆ. ಮತ್ತೊಂದು ಆತಂಕದ ಸಂಗತಿಯಂದೆರೆ 3036 ಮಂದಿಗೆ ಸೋಂಕು ತಗುಲಿರುವ ಸಂಪರ್ಕ ತಿಳಿದುಬಂದಿಲ್ಲ. ವಾರ್ ರೂಂ ವರದಿಯಂತೆ ಮೇ ಅಂತ್ಯದವರೆಗೆ ಕೇವಲ 358 ಇದ್ದ ಪ್ರಕರಣಗಳು ಜೂನ್ ತಿಂಗಳೊಂದರಲ್ಲೇ 4555 ಕ್ಕೆ ಏರಿಕೆಯಾಗಿದೆ. ಅನ್ಲಾಕ್ ಮಾಡಿದ ಹಿನ್ನೆಲೆ ಜೂನ್ ಒಂದು ತಿಂಗಳಲ್ಲೇ 4169 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದೇ ಪ್ರಮಾಣದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ವರದಿಯಾಗುತ್ತಿದ್ದರೆ, ಜುಲೈ, ಆಗಸ್ಟ್ ವೇಳೆಗೆ ಸೋಂಕಿತರ ಸಂಖ್ಯೆ ಲಕ್ಷ ಮೀರುವ ಸಾಧ್ಯತೆ ಇದೆ.
ನಗರದ ವಿಕ್ಟೋರಿಯಾ, ರಾಜೀವ್ ಗಾಂಧಿ, ಬೌರಿಂಗ್ ಕೋವಿಡ್ ಆಸ್ಪತ್ರೆಗಳ ಬೆಡ್ ಖಾಲಿಯಾಗಿವೆ. ಕೋವಿಡ್ ಆಸ್ಪತ್ರೆಗಳಲ್ಲಿ ಬೆಡ್ ಲಭ್ಯವಿಲ್ಲದ್ದಕ್ಕೆ ಬಿಬಿಎಂಪಿ ಕೋವಿಡ್ ಕೇರ್ ಸೆಂಟರ್ ನಿರ್ಮಾಣ ಆರಂಭಿಸಿತು. ನಿನ್ನೆ ಸಂಜೆಯವರೆಗೆ 600 ಸೋಂಕಿತರನ್ನು ಸ್ಥಳಾಂತರಿಸಲಾಗಿದೆ. ಹಜ್ ಭವನ ಹಾಗೂ ರವಿಶಂಕರ್ ಗುರೂಜಿ ಆಶ್ರಮ ಭರ್ತಿಯಾಗಿದೆ. ಉಳಿದಂತೆ ಕಂಠೀರವ, ಜಿಕೆವಿಕೆ, ಬೆಂಗಳೂರು ವಿಶ್ವವಿದ್ಯಾಲಯದ ಹಾಸ್ಟೆಲ್ ಬಳಕೆಗೆ ವಿದ್ಯಾರ್ಥಿಗಳಿಂದ ವಿರೋಧ ವ್ಯಕ್ತವಾಗಿದೆ. ಬಿಬಿಎಂಪಿ ಇತ್ತೀಚೆಗೆ ನಡೆಸಿದ ಸಾರ್ವತ್ರಿಕ ಆರೋಗ್ಯ ಸಮೀಕ್ಷೆಯಲ್ಲಿ 7.52 ಲಕ್ಷ ಕುಟುಂಬಗಳು ಸೋಂಕು ತಗುಲುವ ಅಪಾಯ ಎದುರಿಸುತ್ತಿವೆ. ನಗರದ 1,92,077 ಮಂದಿ ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುವುದು ಸಮೀಕ್ಷೆಯಲ್ಲಿ ದೃಢಪಟ್ಟಿದೆ. 7.44 ಲಕ್ಷ ಮಂದಿ ನಗರದಲ್ಲಿ ಹಿರಿಯ ನಾಗರಿಕರಿದ್ದಾರೆ. ಒಟ್ಟು 30.18 ಲಕ್ಷ ಕುಟುಂಬಗಳು ಆರೋಗ್ಯ ಮಾಹಿತಿ ನೀಡಿವೆ.