ಆನೇಕಲ್: ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದಾರೆ. ಸಾಕಷ್ಟು ಕಡೆಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ.
ಅದರಂತೆ ನಿನ್ನೆ ಕರ್ನಾಟಕ ಗಡಿಭಾಗ ಆನೇಕಲ್ ತಾಲೂಕಿನಲ್ಲಿಯೂ ತಹಶೀಲ್ದಾರ್ ಮಹದೇವಯ್ಯ, ತಾಲೂಕು ವೈದ್ಯಾಧಿಕಾರಿ ಜ್ಞಾನಪ್ರಕಾಶ್ ಹಾಗೂ ಡಿವೈಎಸ್ಪಿ ನಂಜುಡೇಗೌಡ ನೇತೃತ್ವದಲ್ಲಿ ಆರೋಗ್ಯ, ಅಬಕಾರಿ, ಪೊಲೀಸ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಪಂಚಾಯತ್ ಸೇರಿ ಇಲಾಖಾವಾರು ಅಧಿಕಾರಿಗಳ ತುರ್ತು ಸಭೆಯನ್ನು ಕರೆದು ಕೊರೊನಾ ಸೋಂಕು ಹರಡದಂತೆ ಕಟ್ಟೆಚ್ಚರವಹಿಸಲು ಸೂಚನೆ ನೀಡಲಾಯಿತು.
ಆನೇಕಲ್ ತಾಲೂಕು ಕರ್ನಾಟಕ-ತಮಿಳುನಾಡಿಗೆ ಗಡಿಭಾಗಕ್ಕೆ ಹೊಂದುಕೊಂಡಂತಿದೆ. ಹಾಗಾಗಿ ಬಾಗಲೂರು, ತಳಿ, ಅತ್ತಿಬೆಲೆ ಭಾಗಗಳಲ್ಲಿ ಚೆಕ್ ಪೋಸ್ಟ್ಗಳನ್ನು ಮಾಡಿಕೊಂಡು ಸಿಬ್ಬಂದಿಯನ್ನು ನೇಮಕ ಮಾಡಿ, ಬರುವ ವಾಹನ ಸವಾರರನ್ನು ಪರೀಕ್ಷೆ ಮಾಡಲಾಗುವುದು. ಅಂತಹ ಸಂದರ್ಭದಲ್ಲಿ ಸೋಂಕು ಕಂಡಾಗ ಅವರನ್ನು ಕೂಡಲೇ ಆಸ್ಪತ್ರೆಗೆ ರವಾನೆ ಮಾಡಲಾಗುವುದು. ಇನ್ನೂ ತಾಲೂಕಿನಲ್ಲಿನ ಮದ್ಯದ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ದಿನನಿತ್ಯ ಬಳಕೆಯ ವಸ್ತುಗಳು ಹಾಗೂ ಮೆಡಿಕಲ್ ಶಾಪ್, ಪೆಟ್ರೋಲ್ ಬಂಕ್ ಎಂದಿನಂತೆ ಕಾರ್ಯ ನಿರ್ವಹಿಸುತ್ತವೆ ಎಂದು ತಿಳಿಸಿದರು.