ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಕೊರೊನಾದಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇಂದು ಮತ್ತೆ ಮೂವರು ಕೋವಿಡ್ಗೆ ಬಲಿಯಾಗಿದ್ದಾರೆ.
ಈ ಮೂಲಕ ರಾಜ್ಯದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 69ಕ್ಕೆ ಏರಿಕೆಯಾಗಿದೆ. ಇಂದು 120 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 6041ಕ್ಕೆ ಏರಿಕೆಯಾಗಿದೆ. ಇಂದು 257 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, ಒಟ್ಟಾರೆ 2862 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನೂ 3108 ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ 14 ಜನರು ಐಸಿಯುನಲ್ಲಿದ್ದಾರೆ. ಧಾರವಾಡ ಜಿಲ್ಲೆಯ 58 ವರ್ಷದ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದು, ಮಹಾರಾಷ್ಟ್ರದಿಂದ ಹಿಂದುರುಗಿದ ಹಿನ್ನೆಲೆ ಇದೆ. ಬೆಂಗಳೂರಿನ 32 ವರ್ಷದ ವ್ಯಕ್ತಿ ಮೃತಪಟ್ಟ ಬಳಿಕ ಆಸ್ಪತ್ರೆಗೆ ತರಲಾಗಿತ್ತು. ಅತನ ಕೋವಿಡ್ ವರದಿ ಪಾಸಿಟಿವ್ ಬಂದಿದೆ.
ಮತ್ತೊಬ್ಬರು 57 ವರ್ಷದ ವ್ಯಕ್ತಿ ಐಎಲ್‌ಐನಿಂದ ಬಳಲಿದ್ದು, ಜ್ವರ ಹಾಗೂ ಕೆಮ್ಮಿನ ಹಿನ್ನೆಲೆ ಜೂ. 8ರಂದು ಮೃತಪಟ್ಟಿದ್ದರು. ಈ ಮೂವರು ಮೃತಪಟ್ಟಿದ್ದು ಕೊರೊನಾದಿಂದ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ರಾಜ್ಯಾದ್ಯಂತ ಇದುವರೆಗೂ 1,47,210 ಜನರನ್ನು ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಮಾಡಲಾಗಿದೆ. 44160 ಜನರನ್ನು ನಿಗಾದಲ್ಲಿಡಲಾಗಿದ್ದು, 25502 ಮಂದಿ ಸೋಂಕಿತರ ಪ್ರಾಥಾಮಿಕ ಸಂಪರ್ಕಿತರು ಹಾಗೂ 18,658 ದ್ವಿತೀಯ ಸಂಪರ್ಕಿತರಿದ್ದಾರೆ. ಬಿಬಿಎಂಪಿ ವ್ಯಾಪ್ತಿಯ 31 ಜ್ವರ ಚಿಕಿತ್ಸಾಲಯಗಳಲ್ಲಿ 193 ವ್ಯಕ್ತಿಗಳ ತಪಾಸಣೆ ಮಾಡಲಾಗಿದೆ. ಅಲ್ಲದೆ ರಾಜ್ಯದಲ್ಲಿ 528 ಜ್ವರ ಚಿಕಿತ್ಸಾಲಯಗಳಲ್ಲಿ ಒಟ್ಟು 14,801 ಜನರ ತಪಾಸಣೆ ಮಾಡಲಾಗಿದೆ. 114 ಖಾಸಗಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳಲ್ಲಿ 3145 ಜನರ ತಪಾಸಣೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.