ಬೆಂಗಳೂರು: ಕೊರೊನಾ ಲಾಕ್‌ಡೌನ್ ಹಿನ್ನೆಲೆ ನಗರದ ಮಲ್ಲೇಶ್ವರಂ ಭಾಗದಲ್ಲಿ ನಿತ್ಯ 12 ಸಾವಿರ ಆಹಾರ ಪೊಟ್ಟಣಗಳನ್ನು ವಿತರಣೆ ಮಾಡಲಾಗುತ್ತಿದೆ. ಡಿಸಿಎಂ ಅಶ್ವತ್ಥ ನಾರಾಯಣ ಕ್ಷೇತ್ರವಾದ ಮಲ್ಲೇಶ್ವರಂನಲ್ಲಿ ಕೂಲಿ ಕಾರ್ಮಿಕರಿಗೆ, ಹಿರಿಯ ನಾಗರಿಕರಿಗೆ ಬಡವರಿಗೆ ಆಹಾರದ ಪೊಟ್ಟಣ ನೀಡಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಡಿಸಿಎಂ ಅಶ್ವತ್ಥ ನಾರಾಯಣ, ಆಹಾರ ತಯಾರಿಸುವ ಸ್ಥಳಕ್ಕೆ ಭೇಟಿ ನೀಡಿ ಸ್ವಚ್ಛತೆ ಹಾಗೂ ಗುಣಮಟ್ಟದ ಪರಿಶೀಲನೆ ನಡೆಸಿದ್ದೇನೆ. ಕೂಲಿ ಕಾರ್ಮಿಕರು, ಅಸಹಾಯಕರು, ಹಿರಿಯ ನಾಗರಿಕರ ಮನೆಗೆ ತೆರಳಿ, ಆಹಾರ ಪೊಟ್ಟಣ ವಿತರಿಸಲಾಗುತ್ತಿದೆ. ಔಷಧ, ಆಹಾರ ಹಾಗೂ ಇನ್ನಿತರ ಸೌಕರ್ಯಕ್ಕಾಗಿ ಮಲ್ಲೇಶ್ವರ ಕ್ಷೇತ್ರದ ಎಲ್ಲ ವಾರ್ಡ್‌ಗಳ ನಾಗರಿಕರಿಗೆ 3 ಮೊಬೈಲ್ ನಂಬರ್ ಕೊಟ್ಟಿದ್ದೇವೆ. ಜತೆಗೆ, ಎಲ್ಲ ರಸ್ತೆಗಳಲ್ಲಿ ಸೋಂಕು ನಿವಾರಕ ಔಷಧ ಸಿಂಪಡಿಸಲಾಗುತ್ತಿದೆ ಎಂದಿದ್ದಾರೆ.
ಪ್ರಸ್ತುತ ಸಭೆ, ಸಮಾರಂಭಗಳನ್ನು ಆಯೋಜಿಸದೇ ನಾಗರಿಕರೂ ಉತ್ತಮ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ. ಆದರೆ, ವೈರಸ್ ಸಂಪೂರ್ಣವಾಗಿ ನಿರ್ಮೂಲನೆ ಆಗುವವರೆಗೂ ಅಂದರೆ ಮುಂದಿನ 7-8 ತಿಂಗಳು ಇದೇ ರೀತಿ ಸಹಕಾರ ಮುಂದುವರಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡುವ ಜತೆಗೆ ಮಾಸ್ಕ್‌ಗಳನ್ನು ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು.
ಸೋಂಕಿನ ಪ್ರಮಾಣ, ಸ್ಥಿತಿಗತಿ ಹಾಗೂ ವ್ಯವಸ್ಥೆಯ ಸದೃಢತೆಯನ್ನು ಪರಿಶೀಲಿಸಿದ ನಂತರ ಲಾಕ್‌ಡೌನ್ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಒಂದು ನಿರ್ಧಾರಕ್ಕೆ ಬರಬಹುದು. ಸಮಾಜದ ಹಿತದೃಷ್ಟಿಯಿಂದ ಸರ್ಕಾರ ಕೈಗೊಳ್ಳುವ ಯಾವುದೇ ನಿರ್ಧಾರವನ್ನು ಸಾರ್ವಜನಿಕರು ತಪ್ಪದೇ ಪಾಲಿಸಬೇಕು ಎಂದಿದ್ದಾರೆ.