ಬೆಂಗಳೂರು : ರಾಜ್ಯದಲ್ಲಿ ಮತ್ತೆ ಜೆಡಿಎಸ್ ಪಕ್ಷವನ್ನು ಹಳ್ಳಿಗಳು ಹಾಗು ಬೂತ್ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಕೋರ್ ಕಮಿಟಿ ರಚಿಸಲಾಗಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯ, ರೈತರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡುತ್ತೇವೆ ಎಂದು ಶಾಸಕ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.
ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಇಂದು (ಶುಕ್ರವಾರ) ನಡೆದ ಜೆಡಿಎಸ್ ಮೊದಲ ಕೋರ್ ಕಮಿಟಿ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಭಾಗ ಮಟ್ಟದ ಸಭೆ, ಜಿಲ್ಲಾ ಮಟ್ಟದ ಸಭೆ, ವಿವಿಧ ಮೋರ್ಚಾಗಳ ಹಾಗೂ ಪಧಾದಿಕಾರಿಗಳ ನೇಮಕ ಮಾಡಲು ಸಭೆಯಲ್ಲಿ ಚರ್ಚೆ ಆಗಿದೆ.
ಆ ನಿಟ್ಟಿನಲ್ಲಿ ಆಗಸ್ಟ್ 20 ರಿಂದ ಸೆಪ್ಟೆಂಬರ್ 30 ರೊಳಗೆ ರಾಜ್ಯಾದ್ಯಂತ ಪ್ರವಾಸ ಮಾಡಲು ತೀರ್ಮಾನ ಮಾಡಲಾಗಿದೆ. ಎಲ್ಲ ಜಿಲ್ಲೆಯ ಪ್ರವಾಸ ಮಾಡಿ ಪಧಾದಿಕಾರಿಗಳ ನೇಮಕ ಮತ್ತಿತರ ವಿಷಯಗಳ ಕುರಿತು ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರಿಗೆ ವರದಿ ನೀಡುತ್ತೇವೆ ಎಂದರು.
ರಾಜ್ಯದ 4 ವಿಭಾಗದಲ್ಲಿ ನಾಲ್ಕು ಸಭೆ : ಸೆಪ್ಟೆಂಬರ್ 1ರಂದು ಮತ್ತೊಮ್ಮೆ ಕೋರ್ ಕಮಿಟಿ ಸಭೆ ನಡೆಸಿ 4 ವಿಭಾಗದ ಸಭೆಯ ಬಗ್ಗೆ ದಿನಾಂಕ ನಿಗದಿ ಮಾಡುತ್ತೇವೆ. ಇವತ್ತಿನ ಕೋರ್ ಕಮಿಟಿ ಸಭೆಯಲ್ಲಿ ಹಲವು ವಿಚಾರ ಚರ್ಚೆಯಾಗಿದೆ. ಪಕ್ಷದ ಸಂಘಟನೆಗೆ ಹೆಚ್ಚಿನ ಗಮನ ಹರಿಸುವ ಬಗ್ಗೆ ದೇವೇಗೌಡರು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದ 4 ವಿಭಾಗದಲ್ಲಿ ನಾಲ್ಕು ಸಭೆ ನಡೆಸುವುದು. ಪಕ್ಷದ ಸೋಲಿನ ಅವಲೋಕನ ಮಾಡಿಕೊಳ್ಳುವುದು. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಿಂದಾಗಿರುವ ತೊಂದರೆಗಳ ಬಗ್ಗೆ ಜನರಿಗೆ ತಿಳಿಸುವುದು. ಗೃಹ ಜ್ಯೋತಿಯಲ್ಲಿ ರೈತರ ಪಂಪ್ ಸೆಟ್ ಗೆ ಹೆಚ್ಚಿನ ಬಿಲ್ ಬರ್ತಿದೆ ಆ ಬಗ್ಗೆ ತಿಳಿಸುವುದು. ಜನರಿಗೆ ಗ್ಯಾರಂಟಿಯ ವೈಫಲ್ಯವನ್ನು ಮುಟ್ಟಿಸುವುದು. ರೈತರಿಗೆ ಆಗುತ್ತಿರುವ ತೊಂದರೆ ಬಗ್ಗೆ ದನಿ ಎತ್ತುವುದು ಸೇರಿದಂತೆ ಹಲವು ವಿಷಯಗಳನ್ನು ಇಟ್ಟುಕೊಂಡು ಜನರ ಬಳಿ ಹೋಗುತ್ತೇವೆ ಎಂದು ಶಾಸಕರು ಹೇಳಿದರು.
ಕಾವೇರಿ ನೀರಿನ ವಿಚಾರವಾಗಿ ಜಿ.ಟಿ ದೇವೇಗೌಡ ಸರ್ವಪಕ್ಷ ಸಭೆ ನಡೆಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು. ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಅವರ ಪಕ್ಷದ ಮಾಜಿ ಸಂಸದರು, ಮಾಜಿ ಸಚಿವರು, ಶಾಸಕರೇ ಹೇಳಿದ್ದಾರೆ. ಅವರಲ್ಲೆ ಒಡಕು ಇದೆ, ಅದನ್ನು ಮುಚ್ಚಿಕೊಳ್ಳಲು ಜೆಡಿಎಸ್, ಬಿಜೆಪಿಯಿಂದ ಶಾಸಕರು, ಮಾಜಿ ಶಾಸಕರು ಬರುತ್ತಿದ್ದಾರೆ ಎಂದು ಕಾಂಗ್ರೆಸ್ ಬೊಬ್ಬೆ ಹೊಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಪಂಚ ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ತಕ್ಷಣ ಜಾರಿಗೊಳಿಸುತ್ತೇವೆ ಎಂದು ಹೇಳಿದ್ದರು. ಆದರೆ ಇನ್ನು ಆಗಿಲ್ಲ. ಸರ್ಕಾರ 100 ದಿನ ಆದ ಮೇಲೆ ನಾವು ಹೋರಾಟ ಕೈಗೊಳ್ಳುತ್ತೇವೆ. ಬಿಜೆಪಿ ಅಧಿಕೃತ ವಿಪಕ್ಷವಾಗಿ ಕೆಲಸ ಮಾಡ್ತಿಲ್ಲ, ಆ ಕೆಲಸ ನಮ್ಮ ನಾಯಕರಾದ ಹೆಚ್.ಡಿ ಕುಮಾರಸ್ವಾಮಿ ಅವರು ಮಾಡ್ತಿದಾರೆ ಎಂದರು.
ಜೆಡಿಎಸ್-ಬಿಜೆಪಿಯ 15 ಶಾಸಕರು, ಮಾಜಿ ಶಾಸಕರು ಕಾಂಗ್ರೆಸ್ ಸೇರುತ್ತಾರೆಂಬ ಸಚಿವ ಚಲುವರಾಯಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ದೇವೇಗೌಡರು, ಹಳೇ ಮೈಸೂರು ಭಾಗದಲ್ಲಿ ಇರೊದೆ ನಾನು ಮತ್ತು ನನ್ನ ಮಗ. ನಮ್ಮ ಪಕ್ಷದಿಂದ ಒಬ್ಬೇ ಒಬ್ಬ ಶಾಸಕರಾಗಲಿ ಅಥವಾ ಮಾಜಿ ಶಾಸಕರಾಗಲಿ ಕಾಂಗ್ರೆಸ್ಗೆ ಹೋಗಲ್ಲ. ನನ್ನನ್ನು ಯಾರು ಸಹ ಸಂಪರ್ಕ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ಯಾವುದೇ ಸ್ಥಾನ ಖಾಲಿ ಇಲ್ಲ. ಹೀಗಾಗಿ ಯಾವ ಶಾಸಕರು ಹೋಗ್ತಾರೆ. ಹೋದವರಿಗೆ ಏನು ಸ್ಥಾನ ಕೊಡ್ತಾರೆ. ಬೇರೆಯವರನ್ನು ಕರೆದುಕೊಂಡರೆ, ಕಾಂಗ್ರೆಸ್ನಲ್ಲಿರುವವರು ಬಿಟ್ಟು ಹೋಗುತ್ತಾರೆ ಎಂದ ಜಿ.ಟಿ.ದೇವೇಗೌಡ, ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬೇರೆ ಪಕ್ಷದಲ್ಲಿ ಟಿಕೆಟ್ ಸಿಗದವರು ನಮ್ಮ ಪಕ್ಷಕ್ಕೆ ಬಂದು ಸ್ಪರ್ಧಿಸಿರುವ ಮುಖಂಡರನ್ನು ನಮ್ಮ ಪಕ್ಷದಲ್ಲೆ ಉಳಿಸಿಕೊಳ್ಳುವ ಕೆಲಸ ಮಾಡುತ್ತೇವೆ.
ಹೆಚ್.ಡಿ.ಕುಮಾರಸ್ವಾಮಿ ಅವರೊಬ್ಬರಿಂದಲೇ ಪಕ್ಷ ಕಟ್ಟುವುದಕ್ಕೆ ಆಗಲ್ಲ. ನೀವೆಲ್ಲ ನಮ್ಮ ಜೊತೆ ಇರಬೇಕೆಂದು ವರಿಷ್ಠ ದೇವೇಗೌಡರೇ ಹೇಳಿದ್ದಾರೆ. ಹಾಗಾಗಿ, ಎಲ್ಲರೂ ನಮ್ಮ ಜೊತೆ ಇರುತ್ತಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕೋರ್ ಕಮಿಟಿ ಸಂಚಾಲಕ ವೈ.ಎಸ್.ವಿ.ದತ್ತಾ, ಸದಸ್ಯರಾದ ಬಂಡೆಪ್ಪ ಕಾಶೆಂಪುರ್, ಎಚ್.ಕೆ.ಕುಮಾರಸ್ವಾಮಿ, ವೆಂಕಟರಾವ್ ನಾಡಗೌಡ, ಸಿ.ಎಸ್.ಪುಟ್ಟರಾಜು, ಆಲ್ಕೋಡ್ ಹನುಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ : JDS: ಕೋರ್ ಕಮಿಟಿಗೆ ಜಿಟಿಡಿ ಅಧ್ಯಕ್ಷ, ದತ್ತ ಸಂಚಾಲಕ, ಆಗಸ್ಟ್ 20ರಿಂದ ರಾಜ್ಯ ಪ್ರವಾಸ