ಬೆಂಗಳೂರು: ನಗರ ಪ್ರದೇಶಗಳಲ್ಲಿ ಕೊರೊನಾ ವಾರಿಯರ್ಗಳಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಹೆಚ್ಚಾಗಿ ಸೋಂಕು ತಗುಲುತ್ತಿದೆ. ಒಮ್ಮೆ ಕೊರೊನಾ ಬಂದ್ರೆ ಆತನನ್ನು ತಿರಸ್ಕೃತ ಭಾವನೆಯಿಂದ ನೋಡುವವರೇ ಹೆಚ್ಚು.. ಇತ್ತೀಚೆಗೆ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಕೊರೊನಾ ಸೋಂಕಿಗೆ ಒಳಗಾಗಿ, ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕೊರೊನಾ ಬಂದ್ರೆ ಏನು ಮಾಡಬೇಕು ಹಾಗೂ ಗುಣಮುಖರಾದ ಬಳಿಕ ಆಹಾರ ಕ್ರಮ ಹೇಗೆ ಇರಬೇಕು ಎಂಬುದರ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.
ಕಳೆದ ಏಪ್ರಿಲ್ 19ರಂದು ಜೆಜೆನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಾದರಾಯನಪುರದಲ್ಲಿ ನಡೆದ ಗಲಭೆ ಬಳಿಕ, ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ್ಟೇಬಲ್ ಸುಧಾಕರನ್ ಎಂಬುವರಿಗೆ ಜೂನ್ 1ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿ ಹೋಮ್ ಕ್ವಾರಂಟೈನ್ಗೆ ಒಳಗಾಗಿ ಮತ್ತೆ ಸೇವೆಗೆ ಕಮ್‌ಬ್ಯಾಕ್ ಆಗಿದ್ದಾರೆ.
ಈ ಕುರಿತು ಮಾತನಾಡಿದ ಅವರು, 'ಮೊದಲಿಗೆ ನನಗೆ ಕೊರೊನಾ ಸೋಂಕಿನ ಲಕ್ಷಣ ಕಂಡು ಬಂದಾಗ ಮುಂಜಾಗ್ರತಾ ಕ್ರಮವಾಗಿ ಸ್ವ್ಯಾಬ್ ಮಾದರಿ ಟೆಸ್ಟ್‌ಗೆ ನೀಡಿದೆ. ಆಗ ಸೋಂಕುವಿರುವುದು ದೃಢವಾಯಿತು. ಎಲ್ಲರಂತೆ ನಾನು ಭಯ ಪಟ್ಟಿದ್ದೆ. ಕ್ವಾರಂಟೈನ್ ಒಳಗಾದಾಗ ಚಿಕಿತ್ಸೆ ಜೊತೆ ಮಾನಸಿಕವಾಗಿ ಸ್ಟ್ರಾಂಗ್ ಇದ್ದರೆ ಏನು ಬೇಕಾದರೂ ಗೆಲ್ಲಬಲ್ಲೆ ಎಂಬುದನ್ನು ಕಂಡುಕೊಂಡು, ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿ ಯಶಸ್ಚಿಯಾದೆ. ಕೊರೊನಾ ಯಾರಿಗಾದ್ರೂ ವಕ್ಕರಿಸಿದ್ರೆ ಆತಂಕಪಡುವ ಅಗತ್ಯವಿಲ್ಲ. ನಿಮ್ಮ ಆತ್ಮಸ್ಥೆರ್ಯ ಹಾಗೂ ಮನೋಬಲ ಹೆಚ್ಚಾಗಿದ್ರೆ ಯಾವುದೇ ಕಾಯಿಲೆ ನಮ್ಮ ಹತ್ತಿರ ಸುಳಿಯದು' ಎಂದರು.
ನಿಮ್ಮ ಆಹಾರ ಕ್ರಮ ಹೀಗಿರಲಿ! : ಕೊರೊನಾ ಬಂದ್ರೂ ಅಷ್ಟೇ.. ಬರದಿದ್ದರೂ ಅಷ್ಟೇ.. ನಿಮ್ಮ ಆಹಾರ ಕ್ರಮ ಬದಲಾವಣೆ ಮಾಡಿಕೊಳ್ಳಿ. ಪ್ರತಿದಿನ ಬೆಳಗ್ಗೆ ಸಾಯಂಕಾಲ ಬಿಸಿ ನೀರು ಕುಡಿಯಿರಿ. ಇದರ ಜೊತೆ ಹಾಲಿಗೆ ಅರಿಶಿನ ಪುಡಿ-ಮೆಣಸು ಪುಡಿ ಬೆರೆಸಿ ಕುದಿಸಿ ದಿನಕ್ಕೆರಡು ಬಾರಿ ಕುಡಿಯಿರಿ. ಊಟದಲ್ಲಿ ತರಕಾರಿ-ಸೊಪ್ಪು ಹೆಚ್ಚಾಗಿ ಬಳಸಿ. ಚಿಕ್ಕ ಮಕ್ಕಳು, ವಯೋವೃದ್ಧರು ಆದಷ್ಟು ಮನೆಯಲ್ಲಿ ಇರಿ. ಅನಿವಾರ್ಯ ಸಂದರ್ಭಗಳಲ್ಲಿ ಹೊರಗಡೆ ಬರುವಾಗ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ನಮ್ಮನ್ನು ನೋಡುವ ದೃಷ್ಟಿಕೋನವೇ ಬೇರೆ! : ಕೊರೊನಾ ಬಂದು ಗುಣಮುಖರಾದ ಬಳಿಕ ನಮ್ಮನ್ನು ನೋಡುವ ದೃಷ್ಟಿಯೇ ಬೇರೆ. ಗೌರವಯುತವಾಗಿ ನೋಡುತ್ತಿದ್ದ ನನ್ನನ್ನು, ಕೊರೊನಾ ಬಂದು ಬಳಿಕ ತಿರಸ್ಕಾರ ಮನೋಭಾವದಿಂದ ನೋಡುತ್ತಾರೆ. ಸಂಬಂಧಿಕರು, ಹಿತೈಷಿಗಳು ಹಾಗೂ ನೆರೆಹೊರೆಯವರು ಮಾತಿನಲ್ಲಿ ಹೇಳದಿದ್ದರೂ ಅವರ ಬಾಡಿ ಲಾಂಗ್ವೇಜ್ನಲ್ಲಿ ನಮ್ಮನ್ನು ಯಾವ ರೀತಿ ನೋಡ್ತಾ ಇದ್ದಾರೆ ಎಂಬುದನ್ನು ಅರಿಯಬಹುದು ಎಂದರು.
ದಿನಸಿ ತರಲು ಮನೆಯ ಅಕ್ಕಪಕ್ಕದ ಅಂಗಡಿಗಳಿಗೆ ಹೋದ್ರೆ ಅಲ್ಲಿ ನೋಡುವ ದೃಷ್ಟಿಯೇ ಬೇರೆ. ಊರಿನಲ್ಲಿ ಕೊರೊನಾ ವಿಷಯ ಗೊತ್ತಾಗಿ ಕೆಲ ದಿನದವರೆಗೂ ಊರು ಕಡೆ ಸುಳಿಯಬೇಡಿ ಎಂದು ಗ್ರಾಮಸ್ಥರು ತಾಕೀತು ಮಾಡಿದ್ದಾರೆ. ಕಾಯಿಲೆ ಎದುರಿಸುವುದಕ್ಕಿಂತ ರೋಗದಿಂದ ಹೊರಬಂದವರು ಎದುರಿಸುತ್ತಿರುವ ಮಾನಸಿಕ ಯಾತನೆ ಹೇಳತೀರದು.
ಹೀಗಾಗಿ ಯಾರನ್ನೂ ನಿರ್ಲಕ್ಷ್ಯದಿಂದ ನೋಡುವುದನ್ನು ಬಿಟ್ಟು, ಅವರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿ ಎಂದು ಅವರು ಮನವಿ ಮಾಡಿದ್ದಾರೆ. ನಿನ್ನೆ ನಗರದಲ್ಲಿ ಕೊರೊನಾ ಸೋಂಕಿಗೆ 15 ಪೊಲೀಸ್ ಸಿಬ್ಬಂದಿ ಒಳಗಾಗಿದ್ದಾರೆ. ಒಟ್ಟು 344 ಪೊಲೀಸರಿಗೆ ಸೋಂಕು ತಗುಲಿದೆ. 126 ಮಂದಿ ಗುಣಮುಖರಾಗಿದ್ದಾರೆ. 737 ಪೊಲೀಸರು ಕ್ವಾರಂಟೈನ್ನಲ್ಲಿದ್ದು, 28 ಪೊಲೀಸ್ ಠಾಣೆಗಳು ಸೀಲ್ಡೌನ್ ಆಗಿವೆ.