ಬೆಂಗಳೂರು: ಮೋಟಾರು ವಾಹನ ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ರಿಡೂ ಮಾಡುವಂತೆ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣ (ಕೆಎಟಿ) ನೀಡಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಕೆಎಟಿ ಆದೇಶ ಪ್ರಶ್ನಿಸಿ ವಿ.ಆರ್.ಲೋಕೇಶ್ ಸೇರಿದಂತೆ 11 ಮಂದಿ ಸಂಭಾವ್ಯ ಆಯ್ಕೆ ಅಭ್ಯರ್ಥಿಗಳು ಸಲ್ಲಿಸಿರುವ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. ಕೆಲಕಾಲ ವಾದ-ಪ್ರತಿವಾದ ಆಲಿಸಿದ ಪೀಠ, ಕೆಎಟಿ ಆದೇಶಕ್ಕೆ ತಡೆಯಾಜ್ಞೆ ನೀಡಿ ಆದೇಶಿಸಿತು.
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಖಾಲಿಯಿದ್ದ 150 ಮೋಟಾರು ವಾಹನ ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿಗೆ 2016 ರ ಫೆ. 4ರಂದು ಅರ್ಜಿ ಆಹ್ವಾನಿಸಿತ್ತು. 2019ರ ಜುಲೈ 4ರಂದು ಸಂಭಾವ್ಯ ಆಯ್ಕೆ ಪಟ್ಟಿ ಪ್ರಕಟಿಸಿತ್ತು. ಈ ವೇಳೆ ತಮ್ಮನ್ನು ಆಯ್ಕೆ ಮಾಡಿದ ಕೆಪಿಎಸ್ಸಿ ಕ್ರಮ ಪ್ರಶ್ನಿಸಿ ಗೋಕುಲ್ ದಾಸ್ ಹಾಗೂ ವೀರಣ್ಣಗೌಡ ಪಾಟೀಲ್ ಎಂಬುವವರು ಕೆಎಟಿ ಮೆಟ್ಟಿಲೇರಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ಕೆಎಟಿ ಆದೇಶ ನೀಡಿ ಕೆಪಿಎಸ್‌ಸಿ ಅರ್ಜಿದಾರರಾದ ದಾಸ್ ಹಾಗೂ ಪಾಟೀಲ್ ಅವರನ್ನು ಮೆರಿಟ್ ಹಾಗೂ ಮಿಸಲಾತಿ ಆಧಾರದ ಮೇಲೆ ನೇಮಕಾತಿಗೆ ಪರಿಗಣಿಸಬೇಕು ಎಂದು ತೀರ್ಪು ನೀಡಿತ್ತು. ಈ ತೀರ್ಪನ್ನು ಸಂಭಾವ್ಯ ಆಯ್ಕೆ ಅಭ್ಯರ್ಥಿಗಳಾದ ಲೋಕೇಶ್ ಹಾಗೂ ಇತರೆ ಅರ್ಜಿದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಕೆಎಟಿ ತೀರ್ಪಿನಿಂದ ತಮ್ಮ ಆಯ್ಕೆ ಪ್ರಕ್ರಿಯೆಗೆ ತೊಂದರೆಯಾಗಿದೆ. ಇದರಿಂದ ಕೆಎಟಿ ಆದೇಶ ರದ್ದುಪಡಿಸಬೇಕು. ಮೋಟಾರು ವಾಹನ ಇನ್ಸ್‌ಪೆಕ್ಟರ್‌ಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲು ಕೆಪಿಎಸ್‌ಸಿಗೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.