ಬೆಂಗಳೂರು : ಅನ್ಲಾಕ್ 3.0 ಬಗ್ಗೆ ಇಂದು ಸಂಜೆ ಮುಖ್ಯಮಂತ್ರಿಗಳ ಜೊತೆ ಸಭೆ ಇದೆ. ಯಾವುದಕ್ಕೆಲ್ಲಾ ರಿಯಾಯಿತಿ ನೀಡಬೇಕು ಎಂದು ಅಧಿಕಾರಿಗಳ ಜೊತೆ ಚರ್ಚೆ ಮಾಡುವುದರ ಜೊತೆಗೆ ಎಲ್ಲಾ ವಿಚಾರಗಳನ್ನ ಪರಿಶೀಲನೆ ಮಾಡುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಡಾ.ದೇವಿ ಪ್ರಸಾದ್ ಶೆಟ್ಟಿ ಸಮಿತಿಯ ಶಿಫಾರಸು ಜಾರಿಗೆ ತರಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಅಲ್ಲದೆ ಮುಂದಿನ ದಿನಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಸಹ ಈ ಸಂದರ್ಭದಲ್ಲಿ ಚರ್ಚಿಸಲಾಗುವುದು ಎಂದಿದ್ದಾರೆ.
ದೇವಸ್ಥಾನ, ಮಾಲ್ ಓಪನ್ ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆ ಇಂದು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಮೊದಲು ಕೋವಿಡ್ ಸ್ಥಿತಿಗತಿಯ ಬಗ್ಗೆ ಚರ್ಚೆ ಮಾಡಿ ಆಮೇಲೆ ತೀರ್ಮಾನ ಮಾಡುತ್ತೇವೆ. ಗಡಿ ಪ್ರದೇಶದ ಪರಿಸ್ಥಿತಿ ಅವಲೋಕಿಸಿ ಏನು ಕ್ರಮ ತೆಗೆದುಕೊಳ್ಳಬೇಕೆಂದು ಸಿಎಂ ತೀರ್ಮಾನ ಮಾಡ್ತಾರೆ ಎಂದು ತಿಳಿಸಿದ್ದಾರೆ.
ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ಸುದ್ದಿ ಪ್ರಸಾರ ಆಗದಂತೆ ಕೇಂದ್ರ ಸಚಿವ ಸದಾನಂದಗೌಡರು ನಿರ್ಬಂಧ ತಂದಿರುವ ವಿಚಾರ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಊಹಾಪೋಹದ ವಿಚಾರದ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ.