ಹೊಸಕೋಟೆ(ಬೆಂಗಳೂರು ಗ್ರಾ.): ವೃತ್ತಿಯಲ್ಲಿ ಸಾಧನೆ ಮಾಡಬೇಕೆಂಬ ಹಂಬಲದಿಂದ 20 ಕಂಟೈನರ್ಗಳನ್ನು ಸಾಲ ಮಾಡಿ ಖರೀದಿಸಿದ ಮಾಲೀಕರೊಬ್ಬರು ಅವುಗಳನ್ನು ವೇರ್ಹೌಸ್ಗೆ ಕಂಟ್ರಾಕ್ಟರ್ ಕೆಲಸಕ್ಕೆಂದು ಬಾಡಿಗೆಗಾಗಿ ಬಿಟ್ಟಿದ್ದರು. ತನ್ನ ಕಂಟೈನರ್ಗಳ ಮೂಲಕ ಸರಕು ಸಾಗಾಣಿಕೆ ಮಾಡುತ್ತಿದ್ದ ಮಾಲೀಕನಿಗೆ ಹೆಚ್ಚುವರಿ ಸಾಗಾಣಿಕೆಯ ಒತ್ತಡದಿಂದ ಬೇರೆಯವರ ವಾಹನಗಳನ್ನು ತರಿಸಿಕೊಂಡು ವಸ್ತುಗಳನ್ನು ಲೋಡ್ ಮಾಡಿ ಮೈಸೂರಿಗೆ ಕಳುಹಿಸಿದ್ದರು. ಆದ್ರೆ ಆ ಲೋಡನ್ನು ಸರಿಯಾದ ಸಮಯಕ್ಕೆ ಕಳುಹಿಸಬೇಕಾದ ಚಾಲಕನೇ ದರೋಡೆ ಮಾಡಿ ಪರಾರಿಯಾಗಿದ್ದಾನೆ.
ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿಹಳ್ಳಿ ವುಡನ್ ವೇರ್ಹೌಸ್ನಲ್ಲಿ ಘಟನೆ ನಡೆದಿದೆ. ಇಲ್ಲಿನ ವೇರ್ಹೌಸ್ಗೆ ಸರಕು ಸಾಗಾಣೆ ಮಾಡಲು ಕಳೆದ ಹಲವು ವರ್ಷಗಳಿಂದ ಶ್ರೀಧರ್ ಗೌಡ ಎಂಬವರು ಗುತ್ತಿಗೆ ಪಡೆದುಕೊಂಡಿದ್ದರು. ನವೆಂಬರ್ 2 ರಂದು ಸಾಗಾಣಿಕೆ ಮಾಡುವ ಬೇಡಿಕೆಗೆ ಅನುಗುಣವಾಗಿ ಮತ್ತೊಂದು ವಾಹನ ಬೇಕಾಗಿದ್ದು, ತನಗೆ ಗೊತ್ತಿರುವ ಕಂಟೈನರ್ ಮಾಲೀಕ ಸಪೀರ್ ಪಾಷ ಎಂಬಾತನಿಗೆ ತಿಳಿಸಿದ್ದಾರೆ. ಅದರಂತೆ, ತನ್ನ ಚಾಲಕನನ್ನು ಕಳುಹಿಸಿಕೊಟ್ಟಿದ್ದಾನೆ. ಇದೇ ತಿಂಗಳ 2 ರಂದು ರಾತ್ರಿ 8 ಗಂಟೆಗೆ ಮೈಸೂರಿಗೆ 15 ಲಕ್ಷ ರೂ ಮೌಲ್ಯದ ವಸ್ತುಗಳಿರುವ ಕಂಟೈನರ್ ಸಾಗಿದೆ. ಆದ್ರೆ ಮೈಸೂರಿಗೆ ಹೋಗಬೇಕಾದ ಚಾಲಕ ಕಂಟೈನರ್ ಸಮೇತ ಕಾಲ್ಕಿತ್ತಿದ್ದಾನೆ.
ಜಿಪಿಎಸ್ ಟ್ರ್ಯಾಕ್ ಅಳವಡಿಸಿದ್ದ ಕಂಟೈನರ್ ಮೈಸೂರು ಕಡೆ ಹೋಗುವುದು ಬಿಟ್ಟು ಬೇರೆಡೆ ಚಾಲಕ ತಿರುಗಿಸಿದ್ದಾನೆ. ಅಷ್ಟೇ ಅಲ್ಲ ಜಿಪಿಎಸ್ ಅನ್ನು ಕಂಟೈನರ್ನಿಂದ ಬಿಚ್ಚಿ ಬೇರೆ ವಾಹನಕ್ಕೆ ಜೋಡಿಸಿದ್ದಾನೆ. ಆ ವಾಹನ ಬಿಡದಿವರೆಗೂ ಹೋಗಿದೆ. ಮಾಲು ಮೈಸೂರು ಕಡೆಗೆ ಹೋಗ್ತಿದೆ ಅಂದುಕೊಂಡಿದ್ದ ಕಾಂಟ್ರಾಕ್ಟರ್‌ಗೆ ಬಿಡದಿ ಬಳಿ ಜಿಪಿಎಸ್ ಕೊನೆ ಆಗಿರುವುದರ ಬಗ್ಗೆ ಗಾಬರಿಯಾಗಿದೆ. ಸಕಾಲಕ್ಕೆ ಮಾಲಿದ್ದ ಕಂಟೈನರ್ ತಲುಪುವುದಿಲ್ಲ ಎಂದರಿತು ರಾತ್ರಿ 12 ಗಂಟೆಗೆ ಕಂಟ್ರಾಕ್ಟರ್ ಕಂಟೈನರ್ ಹುಡುಕಿಕೊಂಡು ಬಿಡದಿ ಬಳಿ ಗುತ್ತಿಗೆದಾರ ಶ್ರೀಧರ್ ಹೋಗಿದ್ದಾರೆ. ಅಲ್ಲಿ ಕಂಟೈನರ್ ಕಾಣಲಿಲ್ಲ. ಬೇರೆ ಯಾವುದೋ ಕಂಟೈನರ್ಗೆ ಅಳವಡಿಸಿದ್ದ ಜಿಪಿಎಸ್ ದೊರೆತಿದೆ. ಶ್ರೀಧರ್ಗೆ ವಾಹನ ಕಳ್ಳತನ ಆಗಿರುವ ಬಗ್ಗೆ ಅನುಮಾನ ಮೂಡಿದೆ.
ಜಿಪಿಎಸ್‌ಸಮೇತ ತಿರುಮಲಶೆಟ್ಟಿಹಳ್ಳಿಯ ಪೊಲೀಸ್ ಠಾಣೆಗೆ ಶ್ರೀಧರ್ ದೂರು ನೀಡಿದ್ದಾರೆ. ಆದ್ರೆ ಎರಡು ದಿನದ ನಂತರ ಅಂದ್ರೆ ನ 4ರಂದು ಕಂಟೈನರ್ ಕೋಲಾರದ ವೇಮಗಲ್ ಬಳಿ ಪತ್ತೆಯಾಗಿದ್ದು, ಕಂಟೈನರ್ ಸೀಲ್ ಬರ್ನ್ ಮಾಡಿ ಒಳಗಿದ್ದ ಮಾಲು ದರೋಡೆ ಮಾಡಿ ಡ್ರೈವರ್ ಪರಾರಿ ಆಗಿರೋದು ಗೊತ್ತಾಗಿದೆ. ತಿರುಮಲ ಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೃತ್ಯ ನಡೆದಿರುವ ವೇಮಗಲ್ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾವಣೆ ಆಗಿಲ್ಲ. ಕಂಟೈನರ್ ಮಾಲೀಕನನ್ನು ಚಾಲಕನೇ ದೋಚಿದ್ದು ವೇರ್ಹೌಸ್ನ ಸಾಗಾಣಿಕೆ ಕಂಟ್ರಾಕ್ಟರ್ ಕಂಗಾಲಾಗಿದ್ದಾನೆ.
ಇದನ್ನೂ ಓದಿ: ನಂದಿಬೆಟ್ಟದ ತಪ್ಪಲಿನ 900 ವರ್ಷಗಳ ಪುರಾತನ ದೇವಸ್ಥಾನದಲ್ಲಿ ಕಳ್ಳತನ