ಬೆಂಗಳೂರು: ಇಬ್ಬರು ಶಂಕಿತ ಉಗ್ರರನ್ನು ನಿನ್ನೆಯಷ್ಟೇ ಬಂಧಿಸಲಾಗಿದ್ದು, ಸದ್ಯ ಅವರನ್ನು 10 ದಿನಗಳ ಕಾಲ ಎನ್ಐಎ ವಶಕ್ಕೆ ನೀಡಿ ಇಲ್ಲಿನ ಕೋರ್ಟ್ ಆದೇಶ ಹೊರಡಿಸಿದೆ.
ಐಸಿಸ್, ಐಎಸ್ಐಎಲ್ ಸಂಘಟನೆಗೆ ಸೇರಿದ ತಮಿಳುನಾಡು ಮೂಲದ ಅಹಮದ್ ಅಬ್ದುಲ್ ಖಾದರ್ ಹಾಗೂ ಇರ್ಫಾನ್ ನಾಸಿರ್ ಎಂಬವರನ್ನು ಬುಧವಾರದಂದು ಎನ್ಐಎ ಬಂಧಿಸಿತ್ತು.
ಇತ್ತೀಚೆಗೆ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯ ಕಣ್ಣಿನ ವೈದ್ಯ ಬಸವನಗುಡಿಯ ಅಪಾರ್ಟ್ಮೆಂಟ್ನಲ್ಲಿದ್ದ ಅಬ್ದುಲ್ ರೆಹಮಾನ್ ಅಲಿಯಾಸ್ ಡಾ. ಬ್ರೇವ್ ಎಂಬಾತನನ್ನು ಉಗ್ರ ಸಂಘಟನೆಗೆ ಸಾಥ್ ನೀಡಿದ ಆರೋಪದಲ್ಲಿ ಬಂಧಿಸಲಾಗಿತ್ತು. ಆತನ ವಿಚಾರಣೆಯ ವೇಳೆ ಈ ಆರೋಪಿಗಳ ಹೆಸರು ಬಾಯಿ ಬಿಟ್ಟಿದ್ದಾನೆ. ಅದರಂತೆ ಸೆ.19ರಂದು ಎಫ್ಐಆರ್ ದಾಖಲಾಗಿತ್ತು.
ಬಂಧಿತ ಅಬ್ದುಲ್ ಖಾದರ್ ಮತ್ತು ಇರ್ಫಾನ್ ನಾಸೀರ್, ಕುರಾನ್ ಸರ್ಕಲ್ ಎಂಬ ವಾಟ್ಸ್ಆ್ಯಪ್ ಗ್ರೂಪ್ ಮಾಡಿಕೊಂಡು ಅದಕ್ಕೆ ನಗರದ ಮುಸ್ಲಿಂ ಯುವಕರನ್ನು ಒಟ್ಟುಗೂಡಿಸಿ ಪ್ರಚೋದಿಸಿದ್ದರು. ಇವರೆಲ್ಲಾ ISIS ಜೊತೆಗಿನ ಹಿಸ್ಬ್ ಉತ್ ತೆಹೀರ್ ಸಂಘಟನೆಯ ಸದಸ್ಯರಾಗಿದ್ದರು. ISISಗೆ ಸಹಾಯ ಮಾಡಲು ಸಿರಿಯಾಗೆ ಹೋಗಲು ಸಿದ್ದತೆ ಕೂಡ ಮಾಡಿಕೊಂಡಿದ್ದರು. ಸಿರಿಯಾಗೆ ಹೋಗಲು ಡಾ. ಅಬ್ದುಲ್ ರಹಮಾನ್ ಸಹ ವ್ಯವಸ್ಥೆ ಮಾಡುತ್ತಿದ್ದ. ಇವನ ಮೂಲಕ ಹೋಗಿ ಐಸಿಸ್ ಸೇರಲು ಮುಂದಾಗಿದ್ದು, ಇದಕ್ಕೆ ಬೆಂಗಳೂರಿನ ಮುಸ್ಲಿಂ ಹುಡುಗರನ್ನು ಪ್ರಚೋದಿಸಿ ಸಿರಿಯಾಗೆ ಹೋಗಲು ಫಂಡ್ ಕಲೆಕ್ಟ್ ಮಾಡಿದ್ದರು ಎಂಬ ವಿಚಾರ ತನಿಖೆಯ ವೇಳೆ ಬಯಲಾಗಿದೆ.
ಆರೋಪಿ ಇರ್ಫಾನ್ ಖಾನ್ ಅಕ್ಕಿ ವ್ಯಾಪಾರಿ ಆಗಿದ್ದ. ಅಬ್ದುಲ್ ಖಾದರ್ ಚೆನೈನ ಬ್ಯಾಂಕ್ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಈ ಆರೋಪಿಗಳು ಈಗಾಗಲೇ ಬಂಧಿತ ವೈದ್ಯ ಅಬ್ದುಲ್ ರೆಹಮಾನ್ ಜೊತೆ ಸೇರಿ ದೇಶದಲ್ಲಿ ವಿಧ್ವಂಸಕ ಕೃತ್ಯವೆಸಗಲು ಪ್ಲಾನ್ ಮಾಡಿದ್ದರಂತೆ. ಇನ್ನು ಈ ಇಬ್ಬರ ಬಳಿ ಲ್ಯಾಪ್ಟಾಪ್ ಹಾಗೂ ಉಗ್ರ ಸಂಘಟನೆ ಜೊತೆ ಲಿಂಕ್ ಹೊಂದಿದ ಕೆಲ ಸಾಕ್ಷ್ಯಗಳು ಲಭ್ಯವಾಗಿದೆ.
2013-14ರಲ್ಲಿ ಸಿರಿಯಾಗೆ ಹೋಗಿ ಬಂದು ತದನಂತರ ಇಲ್ಲಿ ತಮ್ಮ ವಿಧ್ವಂಸಕ ಚಟುವಟಿಕೆಗಳನ್ನು ಮುಂದುವರೆಸಿದ್ದರು. ಸಿಎಎ ಪ್ರತಿಭಟನೆ ವೇಳೆ ದೆಹಲಿಯಲ್ಲಿ ಸ್ಫೋಟ ಮಾಡುವ ಪ್ಲಾನ್ ನಡೆಸಿದ್ದ ಇವರು ಬಳಿಕ ವಿಫಲರಾಗಿದ್ದರು. ಸದ್ಯ ಇವರದ್ದೇ ಕ್ಯಾಂಪ್ ಇದ್ದು ಅದರಲ್ಲಿ ಮುಸ್ಲಿಂ ಯುವಕರನ್ನು ಸೇರಿಸಿ ಉಗ್ರರ ಸಂಘಟನೆಯತ್ತ ಸೆಳೆಯುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಆರೋಪಿಗಳ ವಿರುದ್ಧ ಸೆಕ್ಷನ್ 120 B, 125, 17, 18 & 18B of UA (P) ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.