ಬೆಂಗಳೂರು: 37,900 ರು.ಗಳ ಮೌಲ್ಯದ ಎರಡು ಐಪ್ಯಾಡ್‌ಗಳನ್ನು ಉಲ್ಲೇಖಿಸಿದ ವಿಳಾಸಕ್ಕೆ ತಲುಪಿಸುವಲ್ಲಿ ವಿಫಲವಾಗಿದ್ದಲ್ಲದೇ, ಕಳೆದು ಹೋಗಲು ಕಾರಣವಾಗಿದ್ದ ಬೆಂಗಳೂರಿನ ಪ್ರಧಾನ ಅಂಚೆ ಕಚೇರಿ ಅಧಿಕಾರಿಗಳು 88,800ಗಳು ಪರಿಹಾರ ನೀಡುವಂತೆ ನಗರದ ಗ್ರಾಹಕರ ಪರಿಹಾರ ವೇದಿಕೆ ಆದೇಶಿಸಿದೆ.
ಹಲಸೂರಿನ ರಾಜೇಶ್ ಕುಮಾರ್ ಸಂಚೆಟಿ ಎಂಬುವರು ಸಲ್ಲಿಸಿದ್ದ ದೂರು ವಿಚಾರಣೆ ನಡೆಸಿ ಪರಿಹಾರ ನೀಡುವಂತೆ ನಗರದ 4ನೇ ಹೆಚ್ಚುವರಿ ಗ್ರಾಹಕರ ಪರಿಹಾರ ವೇದಿಕೆಯ ಅಧ್ಯಕ್ಷರಾದ ಎಂ.ಎಸ್. ರಾಮಚಂದ್ರ ಅವರಿದ್ದ ತ್ರಿಸದಸ್ಯ ಪೀಠ ಈ ಸೂಚನೆ ನೀಡಿದೆ. ತಪ್ಪಿಹೋದ ಎರಡು ಐಪ್ಯಾಡ್‌ಗಳ ಒಟ್ಟು ಮೌಲ್ಯ 75,800 ರು.ಗಳು, ಸೇವಾ ನ್ಯೂನತೆಗಾಗಿ 5 ಸಾವಿರ, ಮಾನಸಿಕ ಹಿಂಸೆ ಅನುಭವಿಸಿದ್ದಕ್ಕಾಗಿ 3 ಸಾವಿರ ರು. ಮತ್ತು ಕಾನೂನು ಹೋರಾಟ ನಡೆಸಿದ್ದಕ್ಕಾಗಿ 5 ಸಾವಿರ ರು. ಸೇರಿ ಒಟ್ಟು 88,800 ರು.ಗಳನ್ನು ನೀಡುವಂತೆ ತಿಳಿಸಿದೆ.
ಆದೇಶವಾದ 45 ದಿನಗಳಲ್ಲಿ ಪರಹಾರ ಮೊತ್ತ ನೀಡಬೇಕು, ಇಲ್ಲವಾದಲ್ಲಿ ಅಂಚೆ ಕಚೇರಿಯ ವಿರುದ್ಧ ದೂರುದಾರರು ಕ್ರಿಮಿನಲ್ ಪ್ರಕರಣ ದಾಖಲಿಸಲು ಅವಕಾಶವನ್ನು ಕಲ್ಪಿಸಿದೆ.
ಪ್ರಕರಣದ ಹಿನ್ನೆಲೆ ಏನು?: ನಗರದ ಹಲಸೂರು ನಿವಾಸಿ ರಾಜೇಶ್ ಕುಮಾರ್ ಸಂಚಟ್ಟಿ ಎಂಬುವರು ಮನಿಷಾ ಟ್ರೇಡಿಂಗ್ ಕಂಪನಿ ನಡೆಸುತ್ತಿದ್ದು, ಎಲೆಕ್ಟ್ರಾನಿಕ್ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದರು. 37,900 ರು.ಗಳ ಮೌಲ್ಯದ ಎರಡು ಐಪ್ಯಾಡ್‌ಗಳನ್ನು ನಿಖಿಲ್ ಸಿಂಘ್ ಹಾಗೂ ಅಭಿಷೇಕ್ ಮಿಶ್ರಾ ಎಂಬುವರಿಗೆ ಅಂಚೆಯ ಸ್ಪೀಡ್ ಪೋಸ್ಟ್ ಮೂಲಕ 2020ರ ಆಗಸ್ಟ್ 25ರಂದು ರವಾನಿಸಿದ್ದರು. ಇದಕ್ಕಾಗಿ ಅಗತ್ಯ ಸೇವಾ ಶುಲ್ಕವನ್ನು ಪಾವತಿಸಿದ್ದರು.
ಆದರೆ, ಅವು ಸಂಬಂಧಿಸಿದ ವಿಳಾಸಕ್ಕೆ ತಲುಪಿರಲಿಲ್ಲ. ಅದನ್ನು ಪತ್ತೆ ಹಚ್ಚುವಂತೆ ಅಂಚೆ ಕಚೇರಿಗೆ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಅಂಚೆ ಅಧಿಕಾರಿಗಳು ನೋಯ್ಡಾಗೆ ಹೋಗಿರುವುದಾಗಿ ತಿಳಿಸಿದ್ದರು. ಆದರೆ, ಐಪ್ಯಾಡ್ ಪತ್ತೆಗೆ ಸಾಕಷ್ಟು ಪ್ರಯತ್ನಿಸಿದರೂ ಸಿಕ್ಕಿರಲಿಲ್ಲ.
ಬಳಿಕ ಐಪ್ಯಾಡ್ ಕಳೆದು ಹೋಗಿರುವ ಕುರಿತು ಮಾಹಿತಿ ಲಭ್ಯವಾಗಿತ್ತು. ಈ ಸಂಬಂಧ ಅರ್ಜಿದಾರರು ಅಂಚೆ ಕಚೇರಿಗೆ ತಮ್ಮ ವಕೀಲರ ಮೂಲಕ ಲೀಗಲ್ ನೋಟಿಸ್ ಜಾರಿ ಮಾಡಿ ಪರಿಹಾರ ನೀಡುವಂತೆ ಕೋರಿದ್ದರು. ಇದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಬಳಿಕ ಗ್ರಾಹಕರ ಪರಿಹಾರ ವೇದಿಕೆಗೆ ದೂರು ಸಲ್ಲಿಸಿದ್ದರು.
ಪರಿಹಾರ ನೀಡಲು ಅವಕಾಶವಿಲ್ಲ : ಪ್ರಕರಣದ ವಿಚಾರಣೆ ವೇಳೆ ಅಂಚೆ ಕಚೇರಿ ಪರ ವಕೀಲರು ವಾದ ಮಂಡಿಸಿ, ಭಾರತೀಯ ಅಂಚೆ ಕಚೇರಿ ಕಾಯಿದೆಯ ಪ್ರಕಾರ 10 ಸಾವಿರಕ್ಕೂ ಹೆಚ್ಚು ಮೌಲ್ಯದ ವಸ್ತುಗಳನ್ನು ಅಂಚೆ ಮೂಲಕ ರವಾನಿಸಬೇಕಾದಲ್ಲಿ ವಿಮೆ ಮಾಡಿಸಿರಬೇಕು. ಅಲ್ಲದೆ, ಅಂಚೆಯಲ್ಲಿ ಯಾವ ವಸ್ತುಗಳಿವೆ ಎಂಬುದಕ್ಕೆ ಸಂಬಂಧಿಸಿದಂತೆ ಅಂಚೆ ಅಧಿಕಾರಿಗಳಿಗೆ ಮಾಹಿತಿ ನೀಡಿರಲಿಲ್ಲ. ಹೀಗಾಗಿ ಯಾವುದೇ ಪರಿಹಾರಕ್ಕೆ ಅರ್ಜಿದಾರರು ಅರ್ಹರಲ್ಲ. ಆದ್ದರಿಂದ ಅರ್ಜಿ ವಜಾಗೊಳಿಸಬೇಕು ಎಂದು ವಾದ ಮಂಡಿಸಿದ್ದರು. ಈ ವಾದವನ್ನು ತಳ್ಳಿ ಹಾಕಿರುವ ವೇದಿಕೆ ಪರಿಹಾರ ನೀಡುವಂತೆ ಸೂಚನೆ ನೀಡಿ ಅರ್ಜಿ ಇತ್ಯರ್ಥ ಪಡಿಸಿದೆ.
ಇದನ್ನೂ ಓದಿ: ಕಾಫಿ ಪೌಡರ್ನಲ್ಲಿ ಕಲಬೆರಕೆ ಮಾಡಿದ್ದ ಅಪರಾಧಿಗೆ ಶಿಕ್ಷೆ: ಕೆಳ ಕೋರ್ಟ್ ಆದೇಶ ಎತ್ತಿಹಿಡಿದ ಹೈಕೋರ್ಟ್