ಬೆಂಗಳೂರು: ''ಪೊಲೀಸ್ ವಸತಿ ಗೃಹ- 2025 ಯೋಜನೆಯಡಿ ರಾಜ್ಯದಲ್ಲಿ 10,034 ವಸತಿ ಗೃಹಗಳನ್ನು ನಿರ್ಮಿಸಲು 2 ಸಾವಿರ ಕೋಟಿ ರೂ.ಗಳ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ'' ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ಸದಸ್ಯರ ಧರಣಿ, ಗದ್ದಲದ ನಡುವೆ ಆರಂಭವಾದ ಪ್ರಶ್ನೋತ್ತರದ ಕಲಾಪದಲ್ಲಿ ಜೆಡಿಎಸ್ ಹಿರಿಯ ಸದಸ್ಯ ಹೆಚ್.ಡಿ. ರೇವಣ್ಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ''9524 ಪಿಸಿ ವಸತಿ ಗೃಹಗಳು, 510 ಪಿಎಸ್‍ಐ ವಸತಿ ಗೃಹಗಳನ್ನು ನಿರ್ಮಿಸಲಾಗುತ್ತಿದೆ. ಈ ವಸತಿ ಗೃಹಗಳ ನಿರ್ಮಾಣ ಅನುಮೋದನೆ ನೀಡಲಾಗಿದೆ'' ಎಂದರು.
''ರಾಜ್ಯದ ವಿವಿಧ ಸ್ಥಳಗಳಲ್ಲಿ ವಸತಿ ಗೃಹಗಳ ನಿರ್ಮಾಣ ಕಾಮಗಾರಿಗಳು ವಿವಿಧ ಹಂತಗಳಲ್ಲಿವೆ. ಇದರಲ್ಲಿ ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ 72 ಪಿಸಿ ವಸತಿ ಗೃಹಗಳನ್ನು ನಿರ್ಮಾಣ ಮಾಡಲು ವ್ಯವಸ್ಥೆ ಮಾಡಲಾಗಿದ್ದು, ಈಗಾಗಲೇ 12 ವಸತಿ ಗೃಹಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಕಟ್ಟಡಗಳನ್ನು ಹಸ್ತಾಂತರ ಮಾಡಲು ಸಿದ್ದತೆ ಮಾಡಲಾಗಿದೆ. ಬಾಕಿ ಇರುವ ವಸತಿ ಗೃಹಗಳನ್ನು ಬಜೆಟ್ ಅನುದಾನದ ಲಭ್ಯತೆ ಆಧರಿಸಿ ಆದ್ಯತೆ ಮೇಲೆ ನಿರ್ಮಾಣ ಮಾಡಲಾಗುವುದು'' ಎಂದು ಹೇಳಿದರು.
ಕಾಂಗ್ರೆಸ್ ಸದಸ್ಯ ಕೆ.ಎಂ.ಶಿವಲಿಂಗೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ''ಅರಸೀಕರೆ ತಾಲೂಕಿನಲ್ಲಿ ಸಂಚಾರಿ ಪೊಲೀಸ್ ಠಾಣೆ ಸೃಜಿಸುವ ಅವಶ್ಯಕತೆ ಇಲ್ಲ. ಆದರೂ ಮುಂದಿನ ದಿನಗಳಲ್ಲಿ ಈ ಬಗ್ಗೆ ಪರಿಶೀಲನೆ ಮಾಡಿ ಪರಿಗಣಿಸಲಾಗುವುದು ಎಂದರು. ನೂತನ ಸಂಚಾರಿ ಪೊಲೀಸ್ ಠಾಣೆ ಸೃಜಿಸಲು ವಾರ್ಷಿಕ 150 ರಿಂದ 250 ಅಪಘಾತ ಪ್ರಕರಣಗಳು ದಾಖಲಾಗಿರಬೇಕು. ಆದರೆ, ಅರಸೀಕೆರೆ ತಾಲ್ಲೂಕಿನಲ್ಲಿ ಅಷ್ಟು ಪ್ರಮಾಣದ ಪ್ರಕರಣಗಳು ದಾಖಲಾಗಿಲ್ಲ. ಹೀಗಾಗಿ ಸಂಚಾರಿ ಪೊಲೀಸ್ ಠಾಣೆಯನ್ನು ಸೃಜಿಸುವ ಅವಶ್ಯಕತೆ ಕಂಡು ಬರುವುದಿಲ್ಲ'' ಎಂದು ಸ್ಪಷ್ಪಪಡಿಸಿದರು.
ಜೆಡಿಎಸ್ ಶಾಸಕ ಸಿ.ಎನ್. ಬಾಲಕೃಷ್ಣ ಅವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ''ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಕಾರೇಹಳ್ಳಿ ಗ್ರಾಮದ ಸರ್ವೆ ನಂಬರ್ 48ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ 18 ಗುಂಟೆ ಜಮೀನಿನಲ್ಲಿ 4 ಗುಂಟೆ ಜಾಗದಲ್ಲಿ ಇರುವ ಕಟ್ಟಡದಲ್ಲಿ ಕಾರೇಹಳ್ಳಿ ಉಪ ಪೊಲೀಸ್ ಠಾಣೆ ಕಾರ್ಯ ನಿರ್ವಹಿಸುತ್ತಿದೆ. ಉಪ ಠಾಣೆ ಕಟ್ಟಡ ನಿರ್ಮಾಣಕ್ಕೆ 40 ಲಕ್ಷ ರೂ. ಒದಗಿಸಲಾಗಿದ್ದು, ಬಜೆಟ್‍ನಲ್ಲಿ ಲಭ್ಯವಾಗುವ ಅನುದಾನದ ಆಧಾರದ ಮೇಲೆ ಉಪ ಠಾಣೆ ಕಟ್ಟಡ ನಿರ್ಮಾಣದ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ದಾಖಲೆ ಬಿಡುಗಡೆ ಮಾಡುತ್ತೇನೆ, ಆ ಮಂತ್ರಿಯನ್ನು ವಜಾ ಮಾಡುತ್ತೀರಾ?: ಸರ್ಕಾರಕ್ಕೆ ಹೆಚ್ಡಿಕೆ ಸವಾಲ್