ಬೆಂಗಳೂರು: ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ನಿಧನಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಸಂತಾಪ ಸೂಚಿಸಿದ್ದಾರೆ.
ಹಲವು ಭಾಷೆಗಳ ಚಿತ್ರಗಳಲ್ಲಿ ಹಾಡಿ, ದಶಕಗಳ ಕಾಲ ನಮ್ಮೆಲ್ಲರನ್ನು ರಂಜಿಸಿದ್ದ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರ ಅಗಲಿಕೆ ಸಾಂಸ್ಕೃತಿಕ ಲೋಕಕ್ಕೆ ತುಂಬಿಬಾರದ ನಷ್ಟ. ಅವರ ಅಗಲಿಕೆಯಿಂದ ನೊಂದಿರುವ ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿ, ಗಾನ ಗಾರುಡಿಗ ಬಾಲಸುಬ್ರಹ್ಮಣ್ಯಂ ಅವರ ಅಗಲಿಕೆ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಅವರ ಮುಂದಾಳತ್ವದಲ್ಲಿ ದೀರ್ಘಕಾಲ ಮೂಡಿಬಂದ 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮವನ್ನು ವೀಕ್ಷಿಸುತಿದ್ದೆ. ಅವರ ಸರಳತೆ, ಸ್ಪರ್ಧಿಗಳನ್ನು ಹುರುದುಂಬಿಸುತ್ತಿದ್ದ ರೀತಿಗೆ ನಾನವರ ಅಭಿಮಾನಿಯಾಗಿದ್ದೆ. ಇಂತಹ ಮಹಾನ್ ಗಾಯಕನಿಗೆ ನನ್ನ ಭಾವಪೂರ್ಣ ವಿದಾಯಗಳು ಎಂದಿದ್ದಾರೆ.
ಸಂಗೀತ ಲೋಕದ ಸ್ವರಮಾಂತ್ರಿಕ, 50 ವರ್ಷಗಳಿಗೂ ಹೆಚ್ಚು ಕಾಲ ಬಹುಭಾಷಾ ಗಾಯಕನಾಗಿ ಅಭಿಮಾನಿಗಳನ್ನು ರಂಜಿಸಿದ ಗಾನಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣ್ಯಂ ನಮ್ಮನಗಲಿ ಹೋಗಿರುವುದು ಅತ್ಯಂತ ದುಃಖದ ವಿಚಾರ. ಕೊನೆಗೂ ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಫಲಿಸಲೇ ಇಲ್ಲ. 'ಎಸ್ಪಿಬಿ' ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಎಂದು ಬೇಡಿಕೊಳ್ಳುತ್ತೇನೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಾಜಿ ಡಿಸಿಎಂ ಜಿ ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಮಹಮದ್ ಮತ್ತಿತರ ನಾಯಕರು ಕೂಡ ಎಸ್ ಪಿ ಬಾಲಸುಬ್ರಮಣ್ಯಂ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.