ಬೆಂಗಳೂರು: ಬಿಬಿಎಂಪಿ ವಾರ್ಡ್ ಮೀಸಲಾತಿ ವಿರುದ್ಧ 2 ಸಾವಿರಕ್ಕೂ ಹೆಚ್ಚು ಆಕ್ಷೇಪಣಾ ಅರ್ಜಿಗಳು ಸಲ್ಲಿಕೆಯಾಗಿದ್ದರೂ ಅವುಗಳಿಗೆ ಮನ್ನಣೆ ನೀಡದ ಬಿಜೆಪಿ ಸರ್ಕಾರದ ವಿರುದ್ಧ ಬೆಂಗಳೂರು ಕೇಂದ್ರ, ದಕ್ಷಿಣ ಮತ್ತು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ವತಿಯಿಂದ ನಾಳೆ ಸ್ವಾತಂತ್ರ್ಯ ಉದ್ಯಾನವನದಿಂದ ಬೃಹತ್ ಮೆರವಣಿಗೆಯ ಮೂಲಕ ಮುಖ್ಯಮಂತ್ರಿಗಳ ನಿವಾಸದೆದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಈ ಪ್ರತಿಭಟನೆಯಲ್ಲಿ ಪ್ರತಿಪಕ್ಷದ ನಾಯಕರು, ಕೆಪಿಸಿಸಿ ಕಾರ್ಯಾಧ್ಯಕ್ಷರುಗಳು, ಸಂಸದರು, ಮಾಜಿ ಸಂಸದರು, ಶಾಸಕರುಗಳು, ಮಾಜಿ ಶಾಸಕರುಗಳು, ಕೆಪಿಸಿಸಿ ಪದಾಧಿಕಾರಿಗಳು, ಮಾಜಿ ಮಹಾಪೌರರುಗಳು ಪಕ್ಷದ ಹಿರಿಯ ಮುಖಂಡರುಗಳು ಭಾಗವಹಿಸಲಿದ್ದಾರೆ. ಹಿರಿಯೂರಿಗೆ ತೆರಳಲಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಕಡಿಮೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಯಾವುದೇ ಸಂದರ್ಭದಲ್ಲಿ ಬೇಕಾದರೂ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಬಿಜೆಪಿ ಸರ್ಕಾರ ತನಗೆ ಬೇಕಾದ ರೀತಿಯಲ್ಲಿ ವಾರ್ಡ್ ಮೀಸಲಾತಿ ಪ್ರಕಟಿಸಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಈ ಸಂಬಂಧ ಸಲ್ಲಿಕೆಯಾದ ತಕರಾರು ಅರ್ಜಿಗೂ ಯಾವುದೇ ಉತ್ತರ ಸಿಕ್ಕಿಲ್ಲ ಎಂದು ಆರೋಪಿಸುತ್ತಿದೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಾಳೆ ಬೆಳಗ್ಗೆ 9 ಗಂಟೆಗೆ ಚೆನ್ನೈಗೆ ಪ್ರಯಾಣ ಬೆಳೆಸಲಿದ್ದಾರೆ. ಮುನ್ನೆಚ್ಚರಿಕ ಕ್ರಮವಾಗಿ ಸಿಎಂ ನಿವಾಸಕ್ಕೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಗೊಳಿಸಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಸ್ವತಂತ್ರ ಉದ್ಯಾನದಿಂದ ಹೊರಡುವ ಕಾಂಗ್ರೆಸ್ ನಾಯಕರನ್ನು ಅಲ್ಲಿಯೇ ತಡೆಯುವ ಇಲ್ಲವೇ ಕೆಲ ದೂರ ಕ್ರಮಿಸಿದ ಬಳಿಕ ವಶಕ್ಕೆ ಪಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ: ಸಾವರ್ಕರ್ ಭಾವಚಿತ್ರ ವಿವಾದ: ಸಹಜ ಸ್ಥಿತಿಗೆ ಮರಳಿದ ಶಿವಮೊಗ್ಗ