ಬೆಂಗಳೂರು: ದೇಶಾದ್ಯಂತ ಕಾಂಗ್ರೆಸ್ ಪಕ್ಷಕ್ಕೆ ಕಷ್ಟದ ದಿನಗಳೇ ಎದುರಾಗುತ್ತಿದ್ದು, ಒಂದೊಂದೇ ರಾಜ್ಯವನ್ನು ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಸದ್ಯ ಸಂಕಷ್ಟ ಸ್ಥಿತಿ ಎದುರಿಸುತ್ತಿದೆ. ರಾಜ್ಯದಲ್ಲಿಯೂ ಕಾಂಗ್ರೆಸ್ ಹೇಳಿಕೊಳ್ಳುವ ಉನ್ನತಿ ಕಾಣುತ್ತಿಲ್ಲವಾದರೂ ಅವನತಿಯತ್ತ ಸಾಗುತ್ತಿರುವುದಂತೂ ಸುಳ್ಳಲ್ಲ.
2018ರಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆದಿದ್ದು, ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸಿಎಂ ಆಗಿದ್ದ ಸಿದ್ದರಾಮಯ್ಯ ನೇತೃತ್ವದಲ್ಲೇ ಚುನಾವಣೆ ಎದುರಿಸಿತ್ತು. ಆದರೆ 122 ಸ್ಥಾನವಿದ್ದ ಕಾಂಗ್ರೆಸ್ ಕೇವಲ 80 ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.
42 ಸ್ಥಾನ ಕಳೆದುಕೊಂಡ ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಮತ್ತೊಮ್ಮೆ ಬಿಎಸ್ ಯಡಿಯೂರಪ್ಪ ಬಿಜೆಪಿ ಸೇರಿ ಪಕ್ಷ ಸಾರಥ್ಯ ವಹಿಸಿಕೊಂಡು ಬಿಜೆಪಿ ಪಕ್ಷವನ್ನು 40 ರಿಂದ 104ಕ್ಕೆ ಕೊಂಡೊಯ್ದರು.
ಬಿಎಸ್ವೈ ಸರ್ಕಾರ ರಚಿಸಿ ವಿಫಲವಾದಾಗ, ಜೆಡಿಎಸ್ ಜತೆ ಕೈಜೋಡಿಸಿ ಸರ್ಕಾರ ರಚಿಸಿದ ಕಾಂಗ್ರೆಸ್ ದೊಡ್ಡ ಪಕ್ಷವಾದರೂ ಜೆಡಿಎಸ್ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿತು. ಹೈಕಮಾಂಡ್ ಕೈಗೊಂಡ ನಿರ್ಧಾರ ಕಾಂಗ್ರೆಸ್ ಪ್ರಗತಿಯ ಬದಲು ಅವನತಿಯತ್ತ ಸಾಗುವಂತೆ ಮಾಡಿತು.
ಈ ನಡುವೆ ಜಮಖಂಡಿ ಶಾಸಕ ಸಿದ್ದು ನ್ಯಾಮಾಗೌಡ ಹಾಗೂ ಕುಂದಗೋಳ ಶಾಸಕ ಹಾಗೂ ಆ ಸಂದರ್ಭ ಸಚಿವರಾಗಿದ್ದ ಸಿಎಸ್ ಶಿವಳ್ಳಿ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಕ್ರಮವಾಗಿ ಆನಂದ ನ್ಯಾಮಗೌಡ ಹಾಗೂ ಕುಸುಮಾ ಶಿವಳ್ಳಿ ಗೆದ್ದು ಕಾಂಗ್ರೆಸ್ ಬಲ ಯಥಾಸ್ಥಿತಿ ಉಳಿಸಿದ್ದರು.
ಆದರೆ ಮೈತ್ರಿ ಸರ್ಕಾರ ವರ್ಷ ಕಳೆಯುವಷ್ಟರಲ್ಲಿ ಬೇಸತ್ತ 17 ಶಾಸಕರು ರಾಜೀನಾಮೆ ನೀಡಿ ಸರ್ಕಾರ ಬೀಳಿಸಿದರು. ಇದರಲ್ಲಿ 13 ಮಂದಿ ಕಾಂಗ್ರೆಸ್ ಹಾಗೂ ಒಬ್ಬ ಕಾಂಗ್ರೆಸ್ ಗೆ ಬೆಂಬಲ ನೀಡಿದ್ದ ಪಕ್ಷೇತರ ಶಾಸಕ ಎನ್ನುವುದು ಗಮನಾರ್ಹ.
ಈ ಕ್ಷೇತ್ರಗಳ ಪೈಕಿ ಮಸ್ಕಿ ಮತ್ತು ರಾಜರಾಜೇಶ್ವರಿನಗರ ಕ್ಷೇತ್ರದ ಉಪಚುನಾವಣೆಯನ್ನು ಕೋರ್ಟ್ ತಡೆ ಹಿಡಿದ ಹಿನ್ನೆಲೆ ಉಳಿದ 15 ಕ್ಷೇತ್ರಕ್ಕೆ ಚುನಾವಣೆ ನಡೆಯಿತು. ಅಲ್ಲಿ ಆಡಳಿತ ಪಕ್ಷ ಬಿಜೆಪಿ ಪರವಾಗಿ ಸ್ಪರ್ಧಿಸಿದ್ದ 12 ಮಂದಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ ಕೇವಲ 2 ಸ್ಥಾನ ಗೆಲ್ಲುವಲ್ಲಿ ಶಕ್ತವಾಯಿತು.
ಅಲ್ಲಿಯೂ ಹುಣಸೂರಿನಲ್ಲಿ ಜೆಡಿಎಸ್ನಿಂದ ತೆರವಾಗಿದ್ದ ಸ್ಥಾನ ಗೆದ್ದಿತ್ತು. ಉಳಿದೆರಡು ಕ್ಷೇತ್ರಗಳ ಪೈಕಿ ರಾಜರಾಜೇಶ್ವರಿನಗರಕ್ಕೆ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲೂ ಕಾಂಗ್ರೆಸ್ ಸೋಲುಂಡಿದೆ. ಅಲ್ಲಿಗೆ 2018ರಲ್ಲಿ 80 ಸ್ಥಾನ ಗಳಿಸಿದ್ದ ಕಾಂಗ್ರೆಸ್ ಸದ್ಯ 13 ಶಾಸಕರನ್ನು ಕಳೆದುಕೊಂಡು 67ಕ್ಕೆ ಬಂದು ತಲುಪಿದೆ.
ನಡೆದ ಉಪಚುನಾವಣೆಗಳಲ್ಲಿ ಗೆದ್ದಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. ಸದ್ಯ ರಾಜ್ಯದಲ್ಲಿ ಎರಡು ಸ್ಥಾನಗಳು ಅಂದರೆ ಮಸ್ಕಿ ಹಾಗೂ ಬಸವಕಲ್ಯಾಣ ಕ್ಷೇತ್ರಕ್ಕೆ ಚುನಾವಣೆ ನಡೆಯಬೇಕಿದೆ. ಅದೆರಡೂ ಕ್ಷೇತ್ರ ಕಾಂಗ್ರೆಸ್ ಶಾಸಕರಿಂದಲೇ ತೆರವಾಗಿರುವುದು ಅನ್ನುವುದು ಗಮನಾರ್ಹ.
ಲೋಕಸಭೆ, ರಾಜ್ಯಸಭೆ, ಬಿಬಿಎಂಪಿ, ಪರಿಷತ್ನಲ್ಲೂ ಹಿನ್ನೆಡೆ : ವಿಧಾನಸಭೆ ಬಲಾಬಲ ಮಾತ್ರವಲ್ಲ, ಲೋಕಸಭೆ, ಬಿಬಿಎಂಪಿ, ವಿಧಾನ ಪರಿಷತ್ನಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತ್ಯಂತ ಕಳಪೆ ಪ್ರದರ್ಶನ ತೋರಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಹಿಂದೆ ತಾನು ಹೊಂದಿದ್ದ 9 ಸ್ಥಾನಗಳ ಪೈಕಿ 8ನ್ನು ಕಳೆದುಕೊಂಡಿದೆ. ರಾಜ್ಯಸಭೆಯಲ್ಲೂ ಕಳೆದ ವರ್ಷ ಕೆಸಿ ರಾಮಮೂರ್ತಿ ಅವರು ರಾಜೀನಾಮೆ ನೀಡಿ ಬಿಜೆಪಿಯಿಂದ ಕಣಕ್ಕಿಳಿದು ಗೆದ್ದು ಒಂದು ಸ್ಥಾನ ಕಡಿಮೆ ಮಾಡಿದ್ದರು.
ಈ ವರ್ಷ ನಾಲ್ಕು ಸ್ಥಾನಗಳಿಗೆ ನಡೆದ ಆಯ್ಕೆಯಲ್ಲಿ ಕಾಂಗ್ರೆಸ್ ಇಬ್ಬರು ತೆರವು ಮಾಡಿದ ಸ್ಥಾನಕ್ಕೆ ಒಬ್ಬರನ್ನು ಮಾತ್ರ ಆಯ್ಕೆ ಮಾಡಿಕೊಂಡಿದೆ. ಕಳೆದ ಎರಡು ವರ್ಷದಲ್ಲಿ ಎರಡು ಸ್ಥಾನ ಕೈ ಪಕ್ಷಕ್ಕೆ ಕಡಿಮೆ ಆಗಿದೆ.
ಬಿಬಿಎಂಪಿಯಲ್ಲಿ ನಿರಂತರ ನಾಲ್ಕು ವರ್ಷ ಅಧಿಕಾರ ನಡೆಸಿಕೊಂಡು ಬಂದಿದ್ದ ಕಾಂಗ್ರೆಸ್ ಕಳೆದ ವರ್ಷ ಬಿಜೆಪಿಯಿಂದ ಎದುರಾದ ಸ್ಪರ್ಧೆಗೆ ಬಿಬಿಎಂಪಿಯನ್ನೂ ಕಳೆದುಕೊಂಡಿದೆ. ಮತ್ತೊಂದು ಕಡೆ ವಿಧಾನ ಪರಿಷತ್ಗೆ ನಡೆದ ಆಯ್ಕೆ, ನಾಮನಿರ್ದೇಶನ, ಚುನಾವಣೆ ಎಲ್ಲದರಲ್ಲೂ ಕಾಂಗ್ರೆಸ್ ಗೆ ಭಾರಿ ಮುಖಭಂಗವಾಗಿದೆ.
ಇತ್ತೀಚೆಗೆ ನಡೆದ ವಿಧಾನ ಪರಿಷತ್ ನಾಲ್ಕು ಸ್ಥಾನಗಳ ಶಿಕ್ಷಕ ಹಾಗೂ ಪದವೀಧರ ಕ್ಷೇತ್ರದ ಚುನಾವಣೆಯಲ್ಲೂ ಕೈ ಬಳಗ ಕಳಪೆ ಪ್ರದರ್ಶನ ತೋರಿಸಿದೆ. 2019ರಲ್ಲಿ 38 ಸದಸ್ಯ ಬಲ ಹೊಂದಿ ಏಕಾಂಗಿಯಾಗಿ ಬಹುಮತ ಹೊಂದಿದ್ದ ಕಾಂಗ್ರೆಸ್ ಸದಸ್ಯ ಬಲ ಸದ್ಯ ಸಭಾಪತಿ ಸೇರಿದಂತೆ 29ಕ್ಕೆ ಕುಸಿದಿದೆ. 18 ಸದಸ್ಯರನ್ನು ಹೊಂದಿದ್ದ ಬಿಜೆಪಿ ಏಕಾಏಕಿ 31ಕ್ಕೆ ಏರಿದೆ.
ನಿರಂತರವಾಗಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯೇ ಎದುರಾಗುತ್ತಿದ್ದು, ರಾಜ್ಯದಲ್ಲಿ, ಬೆಂಗಳೂರು ಮಹಾನಗರದಲ್ಲಿ ಅಧಿಕಾರ ಕಳೆದುಕೊಂಡಿರುವ ಕೈ ಪಕ್ಷ ಇದೀಗ ವಿಧಾನ ಪರಿಷತ್ನಲ್ಲೂ ಸಭಾಪತಿ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ. ಈ ಮಧ್ಯೆ ಕಾಂಗ್ರೆಸ್ ತೊರೆದ ನಾಯಕರ ಪಟ್ಟಿ ಗಮನಿಸಿದರೆ ಪ್ರಮುಖವಾಗಿ, ಎಂಟಿಬಿ ನಾಗರಾಜ್ (ಹೊಸಕೋಟೆ), ಡಾ.ಕೆ.ಸುಧಾಕರ್ (ಚಿಕ್ಕಬಳ್ಳಾಪುರ), ಮುನಿರತ್ನ (ರಾಜರಾಜೇಶ್ವರಿನಗರ), ಎಸ್.ಟಿ.ಸೋಮಶೇಖರ್ (ಯಶವಂತಪುರ), ರೋಷನ್ಬೇಗ್ (ಶಿವಾಜಿನಗರ), ಭೈರತಿ ಬಸವರಾಜ್ (ಕೆ.ಆರ್.ಪುರ), ಬಿ.ಸಿ.ಪಾಟೀಲ್ (ಹಿರೇಕೆರೂರು), ಮಹೇಶ್ ಕುಮಟ್ಟಳ್ಳಿ (ಅಥಣಿ), ಆರ್.ಶಂಕರ್ (ರಾಣೆಬೆನ್ನೂರು), ಶ್ರೀಮಂತಪಾಟೀಲ್ (ಕಾಗವಾಡ), ರಮೇಶ್ ಜಾರಕಿಹೊಳಿ (ಗೋಕಾಕ್), ಆನಂದ್ ಸಿಂಗ್ (ವಿಜಯನಗರ), ಪ್ರತಾಪ್ ಗೌಡ ಪಾಟೀಲ್ (ಮಸ್ಕಿ), ಶಿವರಾಮ್ ಹೆಬ್ಬಾರ್ (ಯಲ್ಲಾಪುರ) ಹಾಗೂ ಕೆ.ಸಿ. ರಾಮಮೂರ್ತಿ (ಬೆಂಗಳೂರು).
ಪಕ್ಷ ಬಲವರ್ಧನೆ : ಪಕ್ಷ ಬಲವರ್ಧನೆ ಮಾಡುವ ವಿಚಾರವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿದ್ದು, ಕಾಂಗ್ರೆಸ್ ಒಂದು ಜನಮಾನಸದ ಪಕ್ಷ. ಸದ್ಯ ಇದಕ್ಕೆ ತಾತ್ಕಾಲಿಕವಾಗಿ ಹಿನ್ನಡೆ ಆಗಿರಬಹುದು. ಇದಕ್ಕೆ ತನ್ನದೇ ಆದ ಹೆಚ್ಚಾಗಿ ತಿಹಾಸ ಹಿನ್ನೆಲೆ ಇದೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಇದು.
ಅನೇಕ ಕಾರ್ಯಕ್ರಮಗಳನ್ನು ನಾವು ನೀಡಿದ್ದೇವೆ. ಇದನ್ನು ಜನರಿಗೆ ತಲುಪಿಸುವಲ್ಲಿ ಎಲ್ಲೋ ಲೋಪವಾಗಿದೆ ಎನ್ನುವುದು ನನ್ನ ಭಾವನೆ. ತಳಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಕಾರ್ಯವನ್ನು ಮಾಡಬೇಕಾಗಿದೆ.
ಜನರಿಗೆ ಇರುವ ಸಮಸ್ಯೆಯನ್ನು ನಿವಾರಿಸುವ ಹಾಗೂ ಸಬಲರನ್ನಾಗಿಸಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಜನರಿಗೆ ಶಕ್ತಿ ತುಂಬುವ ಕಾರ್ಯ ನಾವು ಮಾಡಬೇಕಿದ್ದು ತಳಮಟ್ಟದಿಂದ ಬಲಪಡಿಸುವ ಕಾರ್ಯವನ್ನು ಮಾಡುತ್ತಿದ್ದೇವೆ ಎಂದು ವಿವರಿಸಿದ್ದಾರೆ.