ಬೆಂಗಳೂರು: ರಾಜ್ಯದಲ್ಲಿ ನೆರೆ ಹಾಗೂ ಬರಪೀಡಿತ ಪ್ರದೇಶಗಳಲ್ಲಿ ಸಮರ್ಪಕ ಪರಿಹಾರ ಕಾರ್ಯ ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಿತು.
ವಿಧಾನಸೌಧದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಜಮಾಯಿಸಿದ ಕೈ ನಾಯಕರು ನೆರೆಗಾಗಿ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡಿಲ್ಲ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇದ್ದರೂ ಸಮರ್ಪಕವಾಗಿ ರಾಜ್ಯಕ್ಕೆ ನ್ಯಾಯ ಒದಗಿಸುವ ಕಾರ್ಯ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿದರು. ರಾಜ್ಯದಲ್ಲಿ 22ಕ್ಕೂ ಹೆಚ್ಚು ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿಯಿಂದಾಗಿ ಸಮಸ್ಯೆ ಉಂಟಾಗಿದ್ದರು ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವ ಕಾರ್ಯವಾಗಿಲ್ಲ. ರಾಜ್ಯದ ಬಿಜೆಪಿ ಸರ್ಕಾರ ತುರ್ತು ಸರ್ವಪಕ್ಷ ಸಭೆ ಕರೆಯಲು ಒತ್ತಾಯಿಸಿದರು.
ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಸೇರಿ ಅನೇಕ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.