ಬೆಂಗಳೂರು: ಇಂದು ಬೆಳಗಾವಿಯಲ್ಲಿ ಕಾಂಗ್ರೆಸ್ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಸಮಾವೇಶ ನಡೆಯಲಿದ್ದು, ಪಕ್ಷದ ಹಿರಿಯ ನಾಯಕರುಗಳು ಬೆಂಗಳೂರಿನಿಂದ ಬೆಳಗಾವಿಯತ್ತ ಪ್ರಯಾಣ ಬೆಳೆಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುವ ಪ್ರತಿಭಟನೆಯಲ್ಲಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಮಾಜಿ ಸಚಿವರು ಹಾಗೂ ಹಾಲಿ, ಮಾಜಿ ಶಾಸಕರು ರಾಜ್ಯದ ವಿವಿಧ ಭಾಗಗಳಿಂದ ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು ಅಗಮಿಸಲಿದ್ದಾರೆ.
ರಾಜ್ಯ ಸರ್ಕಾರ ನೆರೆಯಿಂದ ನಿರಾಶ್ರಿತರಾದವರಿಗೆ ಸೂಕ್ತ ಪರಿಹಾರ ಕಾರ್ಯ ಕಲ್ಪಿಸಿಲ್ಲ. ಕೇಂದ್ರದ ಮೇಲೆ ಒತ್ತಡ ಹೇರಿ ಅನುದಾನ ತರುವಲ್ಲಿ ವಿಫಲವಾಗಿದೆ. ಬೆಳಗಾವಿ ಭಾಗದ ಜನರಿಗೆ ಉತ್ತರ ಕೊಡಲಾಗದೆ ಪ್ರಸಕ್ತ ಚಳಿಗಾಲದ ಅಧಿವೇಶನವನ್ನು ಬೆಂಗಳೂರಿನಲ್ಲಿ ನಡೆಸುತ್ತಿದೆ. ಈ ಭಾಗದ ಜನರ ಸಮಸ್ಯೆಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಮೊಳಗಲಿದೆ ಉಪಚುನಾವಣೆ ರಣಕಹಳೆ...
ಇದೇ ಸಂದರ್ಭ ಬೆಳಗಾವಿ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಾದ ಅಥಣಿ, ಕಾಗವಾಡ ಹಾಗೂ ಗೋಕಾಕ್ ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕೂಡ ನಡೆಯಲಿದೆ. ಪ್ರತಿಭಟನಾ ಮೆರವಣಿಗೆಯ ನಂತರ ಬೆಳಗಾವಿಯಲ್ಲಿ ಸಭೆ ಸೇರುವ ಕಾಂಗ್ರೆಸ್ ನಾಯಕರು ಈ ಮೂರು ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲಿದ್ದಾರೆ.
ಕಳೆದ ವಾರವಷ್ಟೇ ಹೊಸಕೋಟೆಯಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಿ ಗಮನಸೆಳೆದಿದ್ದ ಕಾಂಗ್ರೆಸ್, ಇದೀಗ ಬೆಳಗಾವಿಯಲ್ಲಿ ಪ್ರತಿಭಟನೆಗೆ ಕರೆ ನೀಡಿದೆ. ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧ ಭಾಗಗಳಿಗೆ ಇದೇ ಮಾದರಿಯ ಪ್ರತಿಭಟನೆ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಲಿದೆ. ಇಂದು ಕೂಡ 25 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು ಸೇರಿಸುವ ಗುರಿಯನ್ನು ಕಾಂಗ್ರೆಸ್ ಹೊಂದಿದೆ.
ಬೆಳಗ್ಗೆ 9 ಗಂಟೆಗೆ ಸಿದ್ದರಾಮಯ್ಯ ಬೆಂಗಳೂರಿನಿಂದ ಬೆಳಗಾವಿಗೆ ಪ್ರಯಾಣ ಬೆಳೆಸಿದ್ದು, ಇತರೆ ನಾಯಕರು ಕೂಡ ಬೆಳಗಾವಿ ತಲುಪಲಿದ್ದಾರೆ.