ಬೆಂಗಳೂರು: ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಭಾಷಣಕ್ಕೆ ಅಡ್ಡಿಪಡಿಸಿದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸುವಂತೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರ ಪ್ರಯುಕ್ತ ಯಶವಂತಪುರದ ಬಿ.ಕೆ ನಗರದಲ್ಲಿ ನಿನ್ನೆ ಸಂಜೆ ಕಾಂಗ್ರೆಸ್ ಅಭ್ಯರ್ಥಿ ಕುಸುಮ ಹನುಮಂತರಾಯಪ್ಪ ಪ್ರಚಾರ ನಡೆಸುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ತಡೆ ಒಡ್ಡಿದ್ದಾರೆ. ಮೋದಿ ಮೋದಿ ಎಂದು ಘೋಷಣೆ ಕೂಗಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರ ಸಭೆ ಮುಂದುವರಿಸಲು ತಡೆಯೊಡ್ಡಿದ್ದಾರೆ. ಇದರಿಂದ ಕುಪಿತರಾದ ಸಿದ್ದರಾಮಯ್ಯ ನಗರ ಪೊಲೀಸ್ ಆಯುಕ್ತರಿಗೆ ಕರೆಮಾಡಿ ಬಿಜೆಪಿ ಕಾರ್ಯಕರ್ತರನ್ನು ಪೊಲೀಸ್ ಬಲದೊಂದಿಗೆ ಚದುರಿಸುವಂತೆ ಮಾಡಿಸಿ ಪ್ರಚಾರ ಸಭೆ ಮುಂದುವರಿಸಿದರು.ಇದಾದ ಬಳಿಕ ನಡೆದ ಪ್ರಚಾರ ಸಭೆಯಲ್ಲಿ ಕೂಡ ಈ ಬಗ್ಗೆ ಅಸಮಾಧಾನ ಹಾಗೂ ಆಕ್ರೋಶ ಹೊರಹಾಕಿದ್ದರು.
ಬಿಜೆಪಿ ವಿರುದ್ಧ ಡಿ.ಕೆ ಸುರೇಶ್ ಕಿಡಿ; ಹೆದರಿಸಿದವರಿಗೆ ಜನರಿಂದ ತಕ್ಕ ಪಾಠ ಎಂದ ಸಂಸದ!
ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಪ್ರಚಾರಕ್ಕೆ ತಡೆಯೊಡ್ಡಿದ ಬಿಜೆಪಿ ಕಾರ್ಯಕರ್ತರ ನಡೆಯನ್ನ ಖಂಡಿಸಿರುವ ಸಂಸದ ಡಿ.ಕೆ. ಸುರೇಶ್, ಅಭ್ಯರ್ಥಿ ಕುಸುಮ ಎಚ್ ಮತ್ತಿತರ ಮುಖಂಡರು ಮತ್ತು ಕಾರ್ಯಕರ್ತರ ನೇತೃತ್ವದಲ್ಲಿ ಯಶವಂತಪುರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಸಿದ್ದರಾಮಯ್ಯರಿಗೆ ತಡೆಯೊಡ್ಡಿದ ಬಿಜೆಪಿ ಕಾರ್ಯಕರ್ತರ ಬಂಧನವಾಗಬೇಕು. ಬಿಜೆಪಿ ಅಭ್ಯರ್ಥಿ ಮುನಿರತ್ನ ಕುಮ್ಮಕ್ಕಿನಿಂದಲೇ ಈ ಕೃತ್ಯ ನಡೆದಿದೆ. ಘಟನೆಗೆ ಕಾರಣರಾದವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಹಿರಿಯ ಪೊಲೀಸ್ ಅಧಿಕಾರಿಗಳ ಮನವೊಲಿಕೆ ನಂತರ ಕಾಂಗ್ರೆಸ್ ನಾಯಕರು ತಮ್ಮ ಪ್ರತಿಭಟನೆ ವಾಪಸ್ ಪಡೆದರು.