ಬೆಂಗಳೂರು : ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ ಖಂಡಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಮತ್ತು ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದಾರೆ. ವಿಧಾನಸೌಧದ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಇಂದು ಸಂಜೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ, ರಕ್ಷಿಸಿ ರಕ್ಷಿಸಿ ನ್ಯಾಯಾಧೀಶರನ್ನು ರಕ್ಷಿಸಿ ಎನ್ನುವ ಮೂಲಕ ಸಚಿವ ಆರಗ ಜ್ಞಾನೇಂದ್ರ ಹಾಗೂ ಅಶ್ವತ್ಥ ನಾರಾಯಣ ವಿರುದ್ಧ ಘೋಷಣೆ ಕೂಗಲಾಯಿತು.
ಪ್ರತಿಭಟನೆಯಲ್ಲಿ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ, ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಥೋಡ್, ನಾಗರಾಜ್ ಯಾದವ್, ಮಾಜಿ ಶಾಸಕ ನಾರಾಯಣಸ್ವಾಮಿ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮತ್ತಿತರ ಮುಖಂಡರು ಪಾಲ್ಗೊಂಡಿದ್ದರು.
ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿ : ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಕಚೇರಿಯಿಂದ ಹಿಡಿದು ಗೃಹ ಸಚಿವಾಲಯ ಮತ್ತು ಪೊಲೀಸ್ ಅಧಿಕಾರಿಗಳ ಕಚೇರಿಗಳ ಪ್ರತಿನಿಧಿಗಳು ಭಾಗಿಯಾಗಿದ್ದು, ಸರ್ಕಾರ ಎಲ್ಲವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ. ಹೀಗಾಗಿ ಪ್ರಕರಣದ ಎಲ್ಲ ಬಂಧಿತರಿಂದ ಸೆಕ್ಷನ್ 164 ಪ್ರಕಾರ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಿಎಸ್ಐ ಸೇರಿದಂತೆ ಎಲ್ಲ ಇಲಾಖೆಗಳ ನೇಮಕಾತಿ ಪರೀಕ್ಷೆಯ ಅಕ್ರಮದ ವಿರುದ್ಧ ಕಾಂಗ್ರೆಸ್ ಸಾಂಕೇತಿಕ ಪ್ರತಿಭಟನೆ ಮಾಡುತ್ತಿದೆ. ಪಿಎಸ್ಐ ನೇಮಕ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿರುವ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಅವರಿಂದ ಸಿಆರ್ ಪಿಸಿ ಸೆಕ್ಷನ್ 164 ಪ್ರಕಾರ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹೇಳಿಕೆ ದಾಖಲಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಅಕ್ರಮದಲ್ಲಿ ಭಾಗಿಯಾದ ಸಚಿವರನ್ನು ರಕ್ಷಿಸುತ್ತಿದೆ : ಸರ್ಕಾರ ಈ ಅಕ್ರಮ ಪ್ರಕರಣದಲ್ಲಿ ಸಚಿವರು ಹಾಗೂ ಅಧಿಕಾರಿಗಳನ್ನು ರಕ್ಷಣೆ ಮಾಡಿಕೊಳ್ಳಲು ತಮಗೆ ಬೇಕಾದ ರೀತಿಯಲ್ಲಿ 50 ಆರೋಪಿಗಳಿಂದ ಹೇಳಿಕೆ ದಾಖಲಿಸಿಕೊಂಡಿದೆ. ಕ್ಯಾಮೆರಾಗಳನ್ನು ಬಂದ್ ಮಾಡಿ ಅವರಿಂದ ರಹಸ್ಯವಾಗಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಯಾರು ಯಾವ ಅಧಿಕಾರಿಗಳನ್ನು, ಯಾವ ಕಚೇರಿಯಲ್ಲಿ, ಹೊಟೇಲ್ ನಲ್ಲಿ ಭೇಟಿ ಮಾಡಿದ್ದಾರೆ ಎಂಬುದು ನಮಗೆ ಗೊತ್ತಿದೆ. ಸರ್ಕಾರ ಇದರಲ್ಲಿ ಭಾಗಿಯಾಗಿರುವ ಅಧಿಕಾರಿ ಹಾಗೂ ಸಚಿವರನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದರು.
ಯಾವ ಸಚಿವರು ಅಕ್ರಮದಲ್ಲಿ ಭಾಗಿಯಾದ ಅಭ್ಯರ್ಥಿಯನ್ನು ಹೇಗೆ ವಿಚಾರಣೆಯಿಂದ ರಕ್ಷಿಸಿದರು, 20-25 ದಿನಗಳ ನಂತರ ಅದೇ ಸಚಿವರು ಆ ಅಭ್ಯರ್ಥಿಗೆ ಹಣ ಹಿಂದಿರುಗಿಸಲಾಗುವುದು ಎಂದು ಹೇಳಿ ಆತನನ್ನು ಶರಣಾಗತಿ ಮಾಡಿಸಿದ್ದು ಎಲ್ಲಾ ನಮಗೆ ಗೊತ್ತಿದೆ. ಈಗ ಮಾಡಲಾಗಿರುವ ತನಿಖೆಯಿಂದ ನ್ಯಾಯ ಸಿಗುವುದು ಅಸಾಧ್ಯ. ಈ ಪ್ರಕರಣದ ನ್ಯಾಯಾಂಗ ತನಿಖೆ ಆಗಬೇಕು. ಹಗರಣದಲ್ಲಿ ಭಾಗಿಯಾಗಿರುವ ಮಂತ್ರಿಗಳು ಹಾಗೂ ಅಧಿಕಾರಿಗಳ ಬಂಧನವಾಗಬೇಕು ಎಂದು ಆಗ್ರಹಿಸಿದರು.
ಓದಿ :ಧರ್ಮಸ್ಥಳದ ಧರ್ಮಾಧಿಕಾರಿ ಭೇಟಿ ಮಾಡಿದ ಸಿಎಂ ಬೊಮ್ಮಾಯಿ.. ವೀರೇಂದ್ರ ಹೆಗ್ಗಡೆಗೆ ಅಭಿನಂದನೆ