ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಗೆ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಜೊತೆ ನಾಳೆ ಕಾಂಗ್ರೆಸ್ ನಾಯಕರು ಸಭೆ ನಡೆಸಲಿದ್ದಾರೆ. ನಗರದ ವರ್ತೂರಿನ ಹತ್ತಿರದ ಖಾಸಗಿ ಹೋಟೆಲ್ನಲ್ಲಿ ಈ ಸಭೆ ನಡೆಯಲಿದ್ದು, ಅರ್ಜಿ ಸಲ್ಲಿಕೆದಾರರ ಹಾಜರಿ ಕಡ್ಡಾಯ ಎಂದು ಸೂಚನೆ ನೀಡಲಾಗಿದೆ.
ಸಭೆಯಲ್ಲಿ ಟಿಕೆಟ್ ಆಕಾಂಕ್ಷಿಗಳು ತಮ್ಮ ಜವಾಬ್ದಾರಿಗಳು, ಕ್ಷೇತ್ರದಲ್ಲಿನ ತಮ್ಮ ಪಕ್ಷ ಸಂಘಟನೆ, ಗೆಲುವಿನ ಸಾಧ್ಯತೆಯ ಕುರಿತು ತಿಳಿಸಬೇಕು. ತಮ್ಮ ಕ್ಷೇತ್ರ ವ್ಯಾಪ್ತಿಯ ಬಿಎಲ್ಒಗಳ ಪಟ್ಟಿಯನ್ನೂ ತರಬೇಕಿದೆ. ಇದೇ ವೇಳೆ ಸಭೆಯಲ್ಲಿ ಮತದಾರರ ಮಾಹಿತಿ ಕಳವು ಪ್ರಕರಣದ ಕುರಿತೂ ಚರ್ಚೆ ನಡೆಯಲಿದೆ.
ಕುಮಟಾದಲ್ಲಿಂದು ಪ್ರತಿಭಟನೆ: ಬಿಜೆಪಿ ವಿರುದ್ಧ ರಣಕಹಣೆ ಮೊಳಗಿಸಿರುವ ಕಾಂಗ್ರೆಸ್ ಇಂದು ಕುಮಟಾದಲ್ಲಿ ಪರೇಶ್ ಮೇಸ್ತಾ ಸಾವಿನ 'ಜನಜಾಗೃತಿ ಸಮಾವೇಶ' ನಡೆಸಲಿದೆ. ಡಿ.ಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಯು.ಟಿ ಖಾದರ್, ಆರ್.ವಿ ದೇಶಪಾಂಡೆ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ.
ಈ ಸಂಬಂಧ ಡಿಕೆಶಿ ನಿನ್ನೆಯೇ ಗೋವಾ ತಲುಪಿದ್ದು, ಇಂದು ಕುಮಟಾಗೆ ಆಗಮಿಸುತ್ತಿದ್ದಾರೆ. ಸಿದ್ದರಾಮಯ್ಯ ವಿಶೇಷ ವಿಮಾನದ ಮೂಲಕ ಪ್ರಯಾಣಿಸಬೇಕಿತ್ತು. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇದ್ದು, ಮಳೆ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ವಿಮಾನ ಹಾರಾಟಕ್ಕೆ ತೊಡಕಾಗುವ ಸಾಧ್ಯತೆ ಇದೆ. ಇದರಿಂದ ಅವರ ಪ್ರಯಾಣ ವಿಳಂಬವಾಗುವ ಸಾಧ್ಯತೆ ಗೋಚರಿಸಿದೆ.
ಇದನ್ನೂ ಓದಿ: ಗಡಿ ವಿವಾದ ಮಾತುಕತೆ ಮೂಲಕ ಬಗೆಹರಿಯಲಿ: ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ