ಬೆಂಗಳೂರು: ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಹಿರಿಯ ಮುಖಂಡರ ಸಭೆ ನಡೆಯಿತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಕೇಂದ್ರದ ಮಾಜಿ ಸಚಿವರಾದ ಕೆ.ಎಚ್. ಮುನಿಯಪ್ಪ, ರೆಹಮಾನ್ ಖಾನ್, ರಾಜ್ಯದ ಮಾಜಿ ಸಚಿವರಾದ ಎಚ್.ಕೆ. ಪಾಟೀಲ್, ಎಂ.ಬಿ. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹಮದ್, ರಾಮಲಿಂಗಾರೆಡ್ಡಿ, ಧೃವನಾರಾಯಣ್ ಮತ್ತಿತರರು ಪಾಲ್ಗೊಂಡಿದ್ದರು.
ವಿಧಾನಸಭೆ ಅಧಿವೇಶನ ನಡೆಯುವ ಸಂದರ್ಭ ಸದನದ ಒಳಗೆ ಹಾಗೂ ಹೊರಗೆ ಕೈಗೊಳ್ಳಬೇಕಾಗಿರುವ ಹೋರಾಟಗಳ ಕುರಿತು ಸಲಹೆ ಸೂಚನೆಗಳನ್ನು ಸ್ವೀಕರಿಸಲು ಸಭೆ ಕರೆಯಲಾಗಿದ್ದು, ಹಿಜಾಬ್ ವಿಚಾರವಾಗಿ ಕಾಂಗ್ರೆಸ್ ನಿಲುವು ಹೇಗಿರಬೇಕು ಹಾಗೂ ಪಕ್ಷದ ಮುಖಂಡರು ಯಾವ ರೀತಿಯ ಹೇಳಿಕೆಗಳನ್ನು ನೀಡಬೇಕು ಎಂಬ ಕುರಿತು ಸೂಕ್ತ ನಿರ್ದೇಶನ ನೀಡುವ ಸಂಬಂಧ ಚರ್ಚೆ ನಡೆದಿದೆ.
ಹಿಜಾಬ್ ವಿಚಾರವಾಗಿ ಮುಂದಿನ ದಿನಗಳಲ್ಲಿ ಪಕ್ಷದ ಮುಖಂಡರು ನೀಡುವ ಹೇಳಿಕೆಗಳು ಪಕ್ಷದ ಸ್ಪಷ್ಟತೆ ತೋರಿಸುವಂತೆ ಇರಬೇಕು. ಯಾವುದೇ ಕಾರಣಕ್ಕೂ ಪಕ್ಷ ಮುಜುಗರಕ್ಕೆ ತರುವ ರೀತಿಯ ಹೇಳಿಕೆಗಳನ್ನು ನೀಡಬಾರದು. ಯಾರೇ ಎಲ್ಲೇ ಮಾತನಾಡಿದರೂ ಅದು ಪಕ್ಷದ ಮೂಲ ತತ್ವ ಸಿದ್ಧಾಂತಕ್ಕೆ ಧಕ್ಕೆಯಾಗದ ರೀತಿ ಇರಬೇಕು. ಪಕ್ಷದ ವರ್ಚಸ್ಸಿಗೆ ಕುಂದು ತರುವ ರೀತಿ ಇರಬಾರದು. ಈ ನಿಟ್ಟಿನಲ್ಲಿ ಹಿಜಾಬ್ ವಿಚಾರವಾಗಿ ಪಕ್ಷ ಯಾವ ನಿಲುವು ತೆಗೆದುಕೊಳ್ಳುತ್ತದೆ ಅದಕ್ಕೆ ಎಲ್ಲರೂ ಬದ್ಧವಾಗಿರಬೇಕು ಎಂಬ ತೀರ್ಮಾನ ಸಭೆಯಲ್ಲಿ ಆಗಿದೆ.
ಈಗಾಗಲೇ ವಿಧಾನಪರಿಷತ್ ನಲ್ಲಿ ಮಾತಿಗೆ ಅವಕಾಶ ಕೋರಿರುವ ಹಿರಿಯ ಸದಸ್ಯ ಸಿಎಂ ಇಬ್ರಾಹಿಂ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಲು ಸಿದ್ಧರಾಗಿದ್ದಾರೆ. ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವುದಾಗಿ ಹೇಳಿಕೆ ನೀಡಿರುವ ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಪಕ್ಷದ ನಾಯಕರಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದೆ. ಇದೇ ವಿಚಾರವಾಗಿ ಉಭಯ ಸದನಗಳಲ್ಲಿಯೂ ಚರ್ಚೆ ಕೈಗೆತ್ತಿಕೊಳ್ಳಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಹಿಂದಿನ ಹಿರಿಯ ಕಾಂಗ್ರೆಸ್ ನಾಯಕರ ಸಭೆಯಲ್ಲಿಯೂ ಇದೇ ವಿಚಾರ ಚರ್ಚೆಗೆ ಬಂದಿದೆ. ಈಶ್ವರಪ್ಪ ಹೇಳಿಕೆ ವಿರುದ್ಧ ನಿಲುವಳಿ ಸೂಚನೆ ನೀಡುವ ಬಗ್ಗೆ ಒಲವು ವ್ಯಕ್ತವಾಗಿದೆ. ಕೃಷಿ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಕುಸಿತ ಖಂಡಿಸಿ ಸದನದಲ್ಲಿ ಧರಣಿ, ಸರ್ಕಾರದ ಕೆಲ ನಿರ್ಧಾರಗಳನ್ನು ಖಂಡಿಸಿ ವಿಧಾನಸೌಧ ಪಾದಯಾತ್ರೆ ಸೇರಿದಂತೆ ಹಲವು ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ.
ಇದನ್ನು ಓದಿ:ಘಂಟೆ ಶಬ್ದ ಕಡಿಮೆ ಮಾಡುವಂತೆ ದೇವಾಲಯಕ್ಕೆ ಯಾವುದೇ ನೋಟಿಸ್ ಬಂದಿಲ್ಲ: ಆನಂದ್ ಸಿಂಗ್ ಸ್ಪಷ್ಟನೆ