ಬೆಂಗಳೂರು: ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ರಾಜ್ಯ ಕಾಂಗ್ರೆಸ್ ಒಕ್ಕಲಿಗ ನಾಯಕರ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಗಿದ್ದು, ಒಕ್ಕಲಿಗ ಮತ ಬೇಟೆ, ಮೀಸಲಾತಿ ಸೇರಿದಂತೆ ಮಹತ್ವದ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.
ಮುಂದಿನ ಚುನಾವಣೆಯಲ್ಲಿ ಸಮುದಾಯದ ಮತಗಳನ್ನು ಸೆಳೆಯಲು ಯಾವ ರೀತಿ ಕಾರ್ಯತಂತ್ರ ರೂಪಿಸಬೇಕು. ಅದರಲ್ಲೂ ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆದು, ಹೆಚ್ಚಿನ ಸ್ಥಾನ ಗೆಲ್ಲಲು ಚುನಾವಣಾ ತಂತ್ರ ರೂಪಿಸುವ ಬಗ್ಗೆ, ರಾಜಕೀಯವಾಗಿ ಯಾವ ನಡೆ ತೆಗೆದುಕೊಳ್ಳಬೇಕು. ಮುಖ್ಯವಾಗಿ ಒಕ್ಕಲಿಗ ಮೀಸಲಾತಿ ಬಗ್ಗೆ, ಯಾವ ರೀತಿ ಮೀಸಲಾತಿ ಬೇಡಿಕೆ ಬಗ್ಗೆ ಪಕ್ಷ ಹೆಜ್ಜೆ ಇಡಬೇಕು ಎಂಬುದರ ಕುರಿತು ಸಮಾಲೋಚನೆ ನಡೆದಿದೆ.
ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೃಷ್ಣ ಬೈರೇಗೌಡ, ಟಿ.ಬಿ.ಜಯಚಂದ್ರ, ಮಾಜಿ ಸಚಿವ ಚೆಲುವರಾಯಸ್ವಾಮಿ, ಎಂ.ಕೃಷ್ಣಪ್ಪ, ಸಂಸದ ಡಿ.ಕೆ.ಸುರೇಶ್, ಪ್ರಿಯಾಕೃಷ್ಣ, ಮಧು ಮಾದೇಗೌಡ, ಆತ್ಮಾನಂದ, ಹೆಚ್.ಸಿ ಬಾಲಕೃಷ್, ಶೃಂಗೇರಿ ರಾಜೇಗೌಡ, ಕಿಮ್ಮನೆ ರತ್ನಾಕರ್, ಹನೂರು ನರೇಂದ್ರ, ಮಾಲೂರು ನಂಜೇಗೌಡ, ದಿನೇಶ್ ಗೂಳಿಗೌಡ, ಅನಿಲ್ ಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಜೆಡಿಎಸ್ ಉಚ್ಛಾಟಿತರು ಭಾಗಿ: ಕಾಂಗ್ರೆಸ್ ಒಕ್ಕಲಿಗ ನಾಯಕರ ಸಭೆಯಲ್ಲಿ ಜೆಡಿಎಸ್ನ ಇಬ್ಬರು ಉಚ್ಛಾಟಿತ ಶಾಸಕರಾದ ಗುಬ್ಬಿ ಶ್ರೀನಿವಾಸ್, ಕೋಲಾರದ ಶ್ರೀನಿವಾಸ್ ಗೌಡ ಭಾಗವಹಿಸಿದ್ದರು.
ಗುಬ್ಬಿ ಶ್ರೀನಿವಾಸ್, ನಾನು ಈಗ ಸ್ವತಂತ್ರ ಹಕ್ಕಿ. ಎಲ್ಲಿಗೆ ಬೇಕಾದರೂ ಹೋಗಬಹುದು. ನನ್ನ ಕ್ಷೇತ್ರಕ್ಕೆ ಬಂದು ನನ್ನ ವಿರುದ್ಧವೇ ಅಭ್ಯರ್ಥಿ ಷೋಷಿಸಿದ್ದಾರೆ. ಹಾಗಾಗಿ ನಾನು ಎಲ್ಲಿಗೆ ಬೇಕಾದರೂ ಹೋಗಬಹುದು. ನಾನು ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಗಬಹುದು. ಬಜೆಟ್ ಅಧಿವೇಶನದ ಬಳಿಕ ನನ್ನ ಸದಸ್ಯತ್ವಕ್ಕೆ ರಾಜೀನಾಮೆ ಕೊಡುತ್ತೇನೆ. ಇನ್ನು ಮನವೊಲಿಕೆ ಮುಗಿದ ಅಧ್ಯಾಯ. ಸಮುದಾಯದ ನಾಯಕರ ಸಭೆಗೆ ಬನ್ನಿ ಎಂದು ಆಹ್ವಾನಿಸಿದ್ದರು. ಹಾಗಾಗಿ ಈ ಸಭೆಗೆ ಬಂದಿದ್ದೇನೆ ಎಂದರು.
ಇದನ್ನೂ ಓದಿ: ಬೆಳಗಾವಿ ಅಧಿವೇಶನಕ್ಕೂ ಮುನ್ನ 'ಕೈ' ನಾಯಕರ ಮಹತ್ವದ ಸಭೆ; ಸರ್ಕಾರದ ವಿರುದ್ಧ ಹೋರಾಟಕ್ಕೆ ರೂಪುರೇಷೆ